ಬಾಲಿವುಡ್ ಡ್ರಗ್ಸ್ ಜಾಲದ ನಂಟಿನ ಕುರಿತು ಆಡಳಿತಾರೂಢ ಶಿವಸೇನಾ ಸರ್ಕಾರ ಹಾಗೂ ಬಾಲಿವುಡ್ ನಟರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ನಟಿ ಕಂಗನಾ ರಣಾವತ್, ಇದೀಗ ಹಿರಿಯ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಡ್ರಗ್ಸ್ ದಂಧೆ ಕುರಿತು ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ಜಯಾ ಬಚ್ಚನ್, ಕೆಲವು ವ್ಯಕ್ತಿಗಳು ಚಿತ್ರರಂಗವನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಹೆಸರು ಮಾಡಿದವರು ಈಗ ಅದನ್ನೇ ಚರಂಡಿ ಎಂದು ಕರೆಯುತ್ತಿದ್ದಾರೆ. ತುತ್ತು ನೀಡಿದ ಕೈಯನ್ನೇ ಕೆಲವರು ಕಚ್ಚುತ್ತಾರೆ, ಇದಕ್ಕೆ ನಾನು ಸಂಪೂರ್ಣ ಅಸಮ್ಮತಿ ಸೂಚಿಸುತ್ತೇನೆ ಎಂದು ಹೇಳಿದ್ದರು.
ಆದರೆ ಹಿರಿಯ ನಟಿಯ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ನಟಿ ಕಂಗನಾ, “ಜಯಾ ಜೀ ಒಂದು ವೇಳೆ ನಿಮ್ಮ ಮಗಳು ಶ್ವೇತಾ ಮಾದಕ ವ್ಯಸನಿಯಾಗಿ ಕಿರುಕುಳಕ್ಕೊಳಗಾಗಿದ್ದರೆ .
ಒಂದು ವೇಳೆ ಅಭಿಷೇಕ್ ನಿರಂತರವಾಗಿ ಬೆದರಿಕೆ ಹಾಕಿ, ಕಿರುಕುಳ ನೀಡಿ, ಒಂದು ದಿನ ನೇಣು ಬಿಗಿದುಕೊಂಡಿದ್ದರೆ ನೀವು ಆಗಲೂ ಇದೇ ಮಾತನ್ನು ಹೇಳುತ್ತಿದ್ದೀರಾ? ನಮಗೂ ಸಹಾನುಭೂತಿ ತೋರಿಸಿ” ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ನಟಿ ಜಯಾ ಬಚ್ಚನ್ ಅವರು ಯಾರ ಹೆಸರನ್ನೂ ಉಲ್ಲೇಖಿಸದೇ ಬಿಜೆಪಿ ಸಂಸದ, ನಟ ರವಿ ಕಿಶನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರವಿ ಕಿಶನ್ ಅವರು ಸೋಮವಾರ ಲೋಕಸಭೆಯಲ್ಲಿ ಬಾಲಿವುಡ್ ನ ಡ್ರಗ್ಸ್ ಜಾಲದ ಬಗ್ಗೆ ಹೇಳಿಕೆ ನೀಡಿದ್ದರು.