ನ್ಯೂಯಾರ್ಕ್, ನ. 5: ಕುತೂಹಲಕಾರಿಯಾಗಿದ್ದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ, ನಿನ್ನೆಯಿಂದಲೂ ಟ್ರಂಪ್ ಹಾಗೂ ಜೋ ಬಿಡನ್ ನಡುವೆ ಕುತೂಹಲಕಾರಿ ಹಣಾಹಣಿ ನಡೆಯುತ್ತಿತ್ತು. ಇದು ಚುನಾವಣಾ ವೆಚ್ಚ, ಮತದಾನ ಸೇರಿದಂತೆ ಕೆಲವು ಹೊಸ ದಾಖಲೆಗಳಿಗೆ ಕಾರಣವಾಗಿತ್ತು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷ ಮತ್ತು ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್ ಗಳಿಸಿರುವ ಮತಗಳು ಅಮೆರಿಕ ರಾಜಕೀಯ ಇತಿಹಾಸದಲ್ಲೇ ಗಮನ ಸೆಳೆದಿದೆ.
ದೇಶದ ಚುನಾವಣಾ ಚರಿತ್ರೆಯಲ್ಲಿಯೇ ಇತರ ಅಧ್ಯಕ್ಷರು ಗಳಿಸಿದ್ದಕ್ಕಿಂತ ಅತ್ಯಧಿಕ ಮತಗಳನ್ನು ಬಿಡೆನ್ ಪಡೆದಿದ್ದು, ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು. ಅಲ್ಲದೇ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧಿಕ ಮತ ಗಳಿಕೆ ದಾಖಲೆಯನ್ನೂ ಮಾಜಿ ಉಪಾಧ್ಯಕ್ಷರು ಮುರಿದಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿತ್ತು.
ನಿನ್ನೆ ಬಿಡೆನ್ 70.7 ದಶಲಕ್ಷ ಮತಗಳನ್ನು ಗಳಿಸಿದ್ದರು. ಈವರೆಗೆ ಅಮೆರಿಕದ ಯಾವ ಅಧ್ಯಕ್ಷರೂ ಕೂಡ ಇಷ್ಟು ಸಂಖ್ಯೆ ಮತಗಳನ್ನು ಪಡೆದ ನಿದರ್ಶನಗಳಿಲ್ಲ ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೋ ವರದಿ ಮಾಡಿದೆ.
ಬಿಡೆನ್ ಗಳಿಸಿದ ಈ ಸಂಖ್ಯೆ ಮತವು 2008ರಲ್ಲಿ ಬರಾಕ್ ಒಬಾಮಾ ಗಳಿಸಿದ ಮತಕ್ಕಿಂತಲೂ 3 ಲಕ್ಷ ಹೆಚ್ಚು ಮತಗಳನ್ನು ಒಳಗೊಂಡಿದೆ. 12 ವರ್ಷಗಳ ಹಿಂದೆ ಬರಾಕ್ ಒಬಾಮಾ ಗಳಿಸಿದ್ದ 69,498,516 ಮತಗಳು ಈವರೆಗಿನ ಜನಪ್ರಿಯ ಮತ ಗಳಿಕೆಯ ದಾಖಲೆಯಾಗಿತ್ತು. ಇದನ್ನು ಬಿಡೆನ್ ಅಳಿಸಿ ಹಾಕಿದ್ದಾರೆ.