ಮುಂಬಯಿ, ಅ.20: ನಕಲಿ ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಹೈಕೋರ್ಟ್ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವುದಾದರೆ ಬಂಧನಕ್ಕೂ ಮುನ್ನ ಅವರಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಬೇಕು ಎಂದು ಅಪರಾಧ ವಿಭಾಗದ ಪೊಲೀಸರಿಗೆ ನಿರ್ದೇಶನ ನೀಡಿದೆ.
”ಈ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ತಪ್ಪು ಮಾಡಿರಬಹುದು. ಅದಕ್ಕೆ ಸಂಬಂಧಿಸಿದಂತೆ ನೀವು ಸರಿಯಾದ ತನಿಖೆ ನಡೆಸಬೇಕು, ಇತರೆ ಆರೋಪಿಗಳ ರೀತಿ ಅವರಿಗೂ ಮೊದಲು ಸಮನ್ಸ್ ಜಾರಿಗೊಳಿಸಿದರೆ, ಅವರು ವಿಚಾರಣೆಗೆ ಹಾಜರಾಗುತ್ತಾರೆ. ಎಫ್‌ಐಆರ್ ದಾಖಲಿಸಿದ ಮಾತ್ರಕ್ಕೆ ಎಲ್ಲವೂ ಅಂತಿಮವಾಗುವುದಿಲ್ಲ. ನೀವು ಏನು ತನಿಖೆ ಮಾಡಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲಾಗುವುದು. ತನಿಖೆಯ ವಿವರಗಳನ್ನು ನವೆಂಬರ್ 5ರ ಒಳಗೆ ಕೋರ್ಟ್‌ಗೆ ಒಪ್ಪಿಸಬೇಕು” ಎಂದು ಕೋರ್ಟ್, ಪೊಲೀಸರಿಗೆ ಆದೇಶ ನೀಡಿತು.
ಈಗಾಗಲೇ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ಗೋಸ್ವಾಮಿ ಮೊದಲು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಬಾಂಬೆ ಹೈಕೋರ್ಟ್‌ಗೆ ತೆರಳುವಂತೆ ಸೂಚಿಸಿತ್ತು. ಇದೀಗ ಬಾಂಬೆ ಹೈಕೋರ್ಟ್‌ನಲ್ಲಿ ಗೋಸ್ವಾಮಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.