ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗೂಗಲ್‍ನಲ್ಲಿ ಹುಡುಕಿದ್ದ ಕೆಲವು ಕೀ ವರ್ಡ್ಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ನಟ ಸುಶಾಂತ್ ಸಾವಿನ ಪ್ರಕರಣದ ಕುರಿತು ತನಿಖೆಗಳು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಂಬೈ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್, ಸುಶಾಂತ್ ಅವರು ಆತ್ಮಹತ್ಯೆಗೂ ಮುನ್ನ ಗೂಗಲ್ನಲ್ಲಿ ನೋವಿಲ್ಲದ ಸಾವು (painless death) ಸ್ಕಿಸೋಫ್ರೇನಿಯಾ (ಮಾನಸಿಕ ಕಾಯಿಲೆ), ಬೈಪೋಲರ್ ಡಿಸಾರ್ಡರ್ (ಮಾನಸಿಕ ಸಮಸ್ಯೆ) ಕುರಿತು ಗೂಗಲ್ನಲ್ಲಿ ತಡಕಾಡಿದ್ದರು ಎಂದು ತಿಳಿಸಿದ್ದಾರೆ.
ಅಲ್ಲದೇ ಗೂಗಲ್ನಲ್ಲಿ ಸುಶಾಂತ್ ಅವರು ತಮ್ಮ ಹೆಸರನ್ನು ಕೂಡ ಹುಡುಕಾಡಿದ್ದು, ಯಾರು ತಮ್ಮ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಓದಿದ್ದಾರೆ ಎಂದು ತಿಳಿದುಬಂದಿದೆ. 2019ರ ಜೂನ್ನಿಂದ 2020ರ ಜನವರಿವರೆಗಿನ ಅವರ ಎಲ್ಲ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ 14.5 ಕೋಟಿ ರೂ. ಸಾಲ ಇತ್ತು ಎಂಬುದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.