ಮನೆಯಲ್ಲಿ ಯಾವುದೇ ಶುಭ ಸಮಾರಂಭಗಳಿರಲಿ, ದೇವರ ಪೂಜಾ ಕಾರ್ಯಕ್ರಮಗಳಿರಲಿ ಅಂತಹ ಸಂದರ್ಭಗಳಲ್ಲಿ ಅಲ್ಲಿ ವೀಳ್ಯದೆಲೆಗೆ ಮಹತ್ವದ ಸ್ಥಾನ ಇರುತ್ತದೆ. ಹಿರಿಯರ ಕಾಲದಿಂದಲೂ ಈ ಸಂಪೃದಾಯ ಬೆಳೆದು ಬಂದಿದೆ. ಅಷ್ಟೇ ಅಲ್ಲ, ಆರೋಗ್ಯ ವಿಷಯಗಳಲ್ಲೂ ವೀಳ್ಯದೆಲೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ವೀಳ್ಯದೆಲೆ ಜೊತೆ ಅಡಿಕೆ ಹಾಗೂ ಸುಣ್ಣ ಸೇರಿಸಿ ತಿನ್ನುವುದರಿಂದ ಒಸಡುಗಳ ಸಮಸ್ಯೆಗೆ ಉತ್ತಮ ಪರಿಹಾರವಿದೆ.
ಒಂದೆರಡು ವೀಳ್ಯದೆಲೆ ಸ್ವಲ್ಪ ತುಳಸಿ ಎಲೆ ಹಾಗೂ ಲವಂಗವನ್ನು ಅರೆದು ದಿನದಲ್ಲಿ ಎರಡು ಸೇವಿಸುತಿದ್ದರೆ ಕೆಮ್ಮು ನಿವಾರಣೆಯಾಗುವುದು. ಹೊಟ್ಟೆ ಉಬ್ಬರಿಸಿದಾಗ ಅಜೀರ್ಣವಾದಾಗ ಗ್ಯಾಸ್ಟ್ರಿಕ್ ಸಮಸ್ಯೆ ಆದಾಗ ವೀಳ್ಯದೆಲೆಯ ಜೊತೆ ಎರಡು ಮೂರು ಕಾಳು ಮೆಣಸು ಹಾಗೂ ಏಲಕ್ಕಿ ಬೆರೆಸಿ ಅದನ್ನು ಅರೆದು ಅಥವಾ ಜಗಿದು ರಸವನ್ನು ಕುಡಿದರೆ ತಕ್ಷಣವೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದು.
ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ವೀಳ್ಯದೆಲೆಗೆ ಎಣ್ಣೆ ಸವರಿ ಬಾಣಲೆಯಲ್ಲಿ ಬಿಸಿ ಮಾಡಿ ಅದನ್ನು ಮಕ್ಕಳ ಎದೆಗೆ ಶಾಖ ಕೊಡುವುದರಿಂದ ಉಸಿರಾಟ ನಿರಾಳವಾಗುವುದು. ಅಸ್ತಮಾ, ಕೆಮ್ಮು, ಕಫ, ಶೀತ ಆದಾಗ ವೀಳ್ಯದೆಲೆಯ ಜೊತೆ ತುಳಸಿ ದೊಡ್ಡ ಪತ್ರೆಯ ಎಲೆಗಳ ಜೊತೆ ಒಂದು ಈರುಳ್ಳಿಯನ್ನು ಸೇರಿಸಿ ಜಜ್ಜಿ ರಸ ತೆಗೆದು ಜೇನು ತುಪ್ಪದ ಜೊತೆ ಸೇವಿಸಿದರೆ ಶೀಘ್ರ ಪರಿಹಾರ ಕಾಣುವುದು.
ಗಾಯಕ್ಕೆ ಹಾಗೂ ತುರಿಕೆಗೆ ವೀಳ್ಯದೆಲೆಯ ರಸದ ಜೊತೆ ಐದಾರು ಹನಿ ಲಿಂಬೆ ರಸವನ್ನು ಸೇರಿಸಿ ಹಚ್ಚುವುದರಿಂದ ಗಾಯ ಗುಣವಾಗುವುದು. ಗಂಟಲಿನ ಅಂಟಾದ ಕಫವನ್ನು ವೀಳ್ಯದೆಲೆಯ ರಸ ತೆಗೆದು ಹಾಕುವುದು. ಕರ್ಪೂರದೊಂದಿಗೆ ತೆಂಗಿನೆಣ್ಣೆಯನ್ನು ಬೆರೆಸಿ ವೀಳ್ಯದೆಲೆಯ ರಸವನ್ನು ಬೆರೆಸಿ ಹಣೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುವುದು.
ಇನ್ನು ಹುಡುಗ ಹುಡುಗಿಯ ಮದುವೆ ನಿಶ್ಚಯಕ್ಕೆ ಅಡಿಕೆಯೊಂದಿಗೆ ವೀಳ್ಯದೆಲೆ ಸೇರಿಸಿ ಎಲೆ ಅಡಿಕೆ ಯ ವಿನಿಮಯದೊಂದಿಗೆ ಎರಡು ಕುಟುಂಬಗಳ ಸಂಬಂದಕ್ಕೆ ಈ ಎಲೆ ಅಡಿಕೆ ಸಾಕ್ಷಿಯಾಗುತ್ತದೆ. ಅಷ್ಟೇ ಅಲ್ಲ ನಿತ್ಯದ ದೇವರ ಪೂಜೆಯಲ್ಲಿಯೂ ಹಣ್ಣು ಕಾಯಿ ಜೊತೆ ಈ ಎಲೆ ಅಡಿಕೆ ಬೇಕೇ ಬೇಕು ಇದರಿಂದ ಈ ವೀಳ್ಯದೆಲೆ ದೇವರ ಪೂಜೆಯಲ್ಲೂ ವಿಶೇಷ ಪಾತ್ರವನ್ನು ಪಡೆದಿದೆ.