ಶಿವಮೊಗ್ಗ, ನ. 19: ಮರಾಠಾ ಪ್ರಧಿಕಾರ ರಚಿಸಲು ಆದೇಶ ನೀಡಿದ ಬೆನ್ನಲ್ಲೆ, ಒಕ್ಕಲಿಗ, ವೀರ ಶೈವ ಲಿಂಗಾಯತ, ಒಕ್ಕಲಿಗ, ಕ್ರೈಸ್ತ್ರ, ಕುರುಬ, ರೆಡ್ಡಿ ಸಮುದಾಯ ಹೀಗೆ ಅನೇಕ ಸಮುದಾಯಗಳು ನಿಗಮಗಳನ್ನು ಸ್ಥಾಪಿಸಲು ಸಿಎಂ ಬಳಿ ಪ್ರಸ್ತಾವನೆ ನೀಡಿದ್ದರು. ವೀರ ಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸಿಎಂ ಅಧಿಕೃತವಾಗಿ ಒಪ್ಪಿಗೆಯನ್ನು ನೀಡಿದ್ದರು. ಈ ಬಗ್ಗೆ ರಾಜ್ಯದದಲ್ಲಿ ಈಗಾಗಲೇ ಚರ್ಚೆಗಳು ನಡೆಯುತ್ತಿವೆ.
ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ‘ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ’ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ ಹರತಾಳು ಹಾಲಪ್ಪ ಅವರು ರಾಜ್ಯದಲ್ಲಿ ಹಿಂದುಳಿದ ವರ್ಗದ ಈಡಿಗ, ಬಿಲ್ಲವ, ನಾಮದಾರಿ, ಪೂಜಾರಿ (ಇತರೆ 26 ಉಪಪಂಗಡಗಳನ್ನು ಸೇರಿ) ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿಸ್ತಾರವಾಗಿ ವಾಸವಿದ್ದಾರೆ ಎಂದು ಹೇಳಿದ್ದಾರೆ.
ಇವರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತಿ ಹಿಂದುಳಿದ ಜನಾಂಗದವರಾಗಿರುತ್ತಾರೆ. ಈ ಜನಾಂಗದವರು ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಮತ್ತು ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.