ಹಿಂದಿ ಟೆಲಿವಿಷನ್‍ನಲ್ಲಿ ಪ್ರಖ್ಯಾತಿ ಪಡೆದಿದ್ದ ಆ್ಯಂಕರ್ ಹಾಗೂ ಮಾಡೆಲ್ ಸಮೀರ್ ಶರ್ಮಾ (44) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈನ ಮಲಾಡ್ ವೆಸ್ಟ್ ನಲ್ಲಿರುವ ತಮ್ಮ ಮನೆಯ ಅಡುಗೆ ಮನೆಯಲ್ಲಿ ಸಮೀರ್ ಶರ್ಮಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮೀರ್ ಶರ್ಮಾ ಮಲಾಡ್‍ನ ಅಪಾರ್ಟ್‍ಮೆಂಟ್‍ನಲ್ಲಿ ಇತ್ತೀಚೆಗಷ್ಟೇ ಮನೆ ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದ್ದು, ಅಪಾರ್ಟ್‍ಮೆಂಟ್ ಕಾವಲುಗಾರ ಸಮೀರ್ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಮೀರ್ ಶರ್ಮಾ, ‘ಹೇ ರಿಸ್ತೆ ಹೀ ಪ್ಯಾರ್ ಕೀ’, ‘ಕಹಾನಿ ಘರ್ ಘರ್ ಕೀ’ ಸೇರಿದಂತೆ ಇನ್ನಿತರ ಧಾರವಾಹಿಗಳಲ್ಲಿ ಅಭಿನಯಿಸಿದ್ದರು.
ಘಟನೆಯ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಲಭಿಸಿಲ್ಲ. ಮೇಲ್ನೋಟಕ್ಕೆ ಎರಡು ದಿನಗಳ ಹಿಂದೆಯೇ ಸಮೀರ್ ಶರ್ಮಾ ಮೃತಪಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಲಾಡ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.