ಮೈಸೂರು: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮೊದಲು ನಿದ್ದೆಯಿಂದ ಎದ್ದೇಳಲಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲೋ ಕುಳಿತು ಟ್ವೀಟ್ ಮಾಡುವುದಕ್ಕಾಗಿ ಸರ್ಕಾರದಿಂದ ಸೌಲಭ್ಯ ಕೊಡುತ್ತಿಲ್ಲ.
ಸಿದ್ದರಾಮಯ್ಯ ಎದ್ದು ಮೊದಲು ರಾಜ್ಯ ಪ್ರವಾಸ ಮಾಡಲಿ. ಕೋವಿಡ್ ಬಂದಾಗ ಮಲಗಿದ್ದರು, ಮಳೆಯಿಂದ ಪ್ರವಾಹ ಬಂದಾಗಲೂ ಮಲಗಿದ್ದರು. ಈ ಹಿಂದೆ ಐದು ವರ್ಷ ಆಡಳಿತ ಮಾಡಿದಾಗಲು ಮಲಗೇ ಇದ್ದರೂ. ಆದರೆ ಈಗ ‘ನಿದ್ದೆಯಿಂದ ಎದ್ದೇಳು ಸರ್ಕಾರ’ ಎಂಬ ಅಭಿಯಾನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕೇವಲ ಟ್ವೀಟ್ ಮಾಡೋದಕ್ಕೆ ನಿಮಗೆ ಸರ್ಕಾರದ ಸವಲತ್ತು ಬೇಕಾ? ಪ್ರತಿಪಕ್ಷ ನಾಯಕರಾಗಿ ನಿಮ್ಮ ಜವಾಬ್ದಾರಿ ಏನು? ಐದು ವರ್ಷದಿಂದಲೂ ಸಿದ್ದರಾಮಯ್ಯ ನಿದ್ದೆಯಲ್ಲಿದ್ದಾರೆ. ಹೀಗಾಗಿ ನಿದ್ದೆಯಿಂದ ಎದ್ದೇಳ ಬೇಕಿರುವುದು ನೀವು.
ಐದು ವರ್ಷ ನೀವು ಮುಖ್ಯಮಂತ್ರಿ ಆಗಿದ್ದಿರಿ, ಆಗ ನಿಮ್ಮ ದಿನಚರಿ ಏನಿತ್ತು ಎಂದು ನೆನಪಿಸಿಕೊಳ್ಳಿ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರ ದಿನಚರಿಯನ್ನು ನೋಡಿ. ಇಬ್ಬರ ದಿನಚರಿಯನ್ನು ಹೋಲಿಸಿ, ಯಾವುದು ಸರಿ ಅಂತ ನೀವೇ ನಿರ್ಧಾರ ಮಾಡಿ ಎಂದು ಟೀಕಿಸಿದರು.
ಸಿದ್ದರಾಮಯ್ಯ ಆಗೊಮ್ಮೆ ಈಗೊಮ್ಮೆ ಟ್ವೀಟ್ ಮಾಡುತ್ತಾರೆ. ಆ ಮೂಲಕ ಕಾಂಗ್ರೆಸ್‌ನಲ್ಲಿ ಅವರು ಇನ್ನೂ ಆಕ್ಟೀವ್ ಆಗಿದ್ದಾರೆ ಎಂದು ತೊರಿಸಿಕೊಳ್ಳೋದಕ್ಕೆ ಟ್ವೀಟ್ ಮಾಡುತ್ತಾರೆ. ಪ್ರತಿಪಕ್ಷದ ನಾಯಕರಾಗಿ ಟ್ವೀಟ್ ಮಾಡೋದೆ ನಿಮ್ಮ ಕೆಲಸನಾ? ಎಂದು ಪ್ರಶ್ನಿಸಿದರು.