ವಿಶ್ವದ ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಯಾಗಿರುವ ಆ್ಯಪಲ್ ಸಂಸ್ಥೆ ತನ್ನ ಚೈನೀಸ್ ಆ್ಯಪ್ ಸ್ಟೋರ್ ನಿಂದ 29,800 ಮೊಬೈಲ್ ಆ್ಯಪ್‍ಗಳನ್ನು ತೆಗೆದುಹಾಕಿದೆ.
ಆ್ಯಪಲ್ ಕಂಪನಿ ತೆಗೆದು ಹಾಕಿರುವ ಆ್ಯಪ್‍ಗಳಲ್ಲಿ 26 ಸಾವಿರಕ್ಕೂ ಹೆಚ್ಚು ಗೇಮ್‍ಗಳಾಗಿವೆ ಎನ್ನಲಾಗಿದೆ. ಚೈನೀಸ್ ಪ್ರಾಧಿಕಾರದ ಪರವಾನಗಿ ಇಲ್ಲದ ಮೊಬೈಲ್ ಅಪ್ಲಿಕೇಷನ್‍ಗಳನ್ನು ತೆಗೆದು ಹಾಕುವಂತೆ ಈ ಹಿಂದೆಯೇ ಆ್ಯಪಲ್ ಕಂಪನಿಗೆ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆಯೂ, ಸರ್ಕಾರದಿಂದ ನೀಡಿರುವ ಪರವಾನಗಿಯನ್ನು ಜೂನ್ ಅಂತ್ಯದ ವೇಳೆಗೆ ಸಲ್ಲಿಸುವಂತೆ ಗೇಮ್ ಪಬ್ಲಿಷರ್ಸ್‍ಗಳಿಗೆ ಸೂಚನೆ ನೀಡಿತ್ತು. ಆದರೆ ಆ್ಯಪಲ್ ಸಂಸ್ಥೆಯ ನಿರ್ಧಾರಕ್ಕೆ ಚೀನಾದ ಆಂಡ್ರಾಯ್ಡ್ ಆ್ಯಪ್ ಸ್ಟೋರ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆ ಜುಲೈ ತಿಂಗಳ ಆರಂಭದಲ್ಲಿ 2500 ಆ್ಯಪ್‍ಗಳನ್ನು ತನ್ನ ಆ್ಯಪ್ ಸ್ಟೋರ್ ನಿಂದ ತೆಗೆದುಹಾಕಿತ್ತು ಎಂದು ವರದಿಯಾಗಿದೆ.
ಇನ್ನೊಂದೆಡೆ ವಿಶ್ವಕ್ಕೆ ಕೋವಿಡ್-19 ವೈರಸ್ ಹರಡಲು ಕಾರಣವಾದ ಚೀನಾದಿಂದ ಒಂದೊಂದೇ ಉದ್ಯಮಗಳು ಕಳಚಿಕೊಳ್ಳುತ್ತಿವೆ. ಅದರಲ್ಲೂ ಕಡು ವೈರಿ ಅಮೆರಿಕ, ಚೀನಾದಲ್ಲಿರುವ ತನ್ನ ಕಂಪನಿಗಳ ಮೇಲೆ ಕಣ್ಣಿಟ್ಟಿದೆ. ಇದೀಗ ಚೀನಾವನ್ನು ಎದುರುಹಾಕಿಕೊಂಡಿರುವ ಭಾರತಕ್ಕೆ ಆ್ಯಪಲ್ ಸಂಸ್ಥೆಯು ಒಂದು ಆಫರ್ ನೀಡಿದೆ. ಚೀನಾದ ಗುತ್ತಿಗೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಐಫೋನ್ ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ಚಿಂತಿಸಿದೆ. ಆರು ಉತ್ಪಾದನಾ ಘಟಕಗಳನ್ನು ಭಾರತಕ್ಕೆ ವರ್ಗಾಯಿಸಲಿರುವ ಆ್ಯಪಲ್ ಸಂಸ್ಥೆಯು 5 ಬಿಲಿಯನ್ ಡಾಲರ್ ಮೊತ್ತದ ಐಫೋನ್ಅನ್ನು ಭಾರತದಲ್ಲೇ ಉತ್ಪಾದಿಸಲಿದೆ. ಬರುವ ದಿನಗಳಲ್ಲಿ ಐಫೋನ್ ಹೊರತಾಗಿ ಲ್ಯಾಪ್ಟಾಪ್, ಟ್ಯಾಬ್ಲೆಟ್ ಸೇರಿದಂತೆ ಇನ್ನಷ್ಟು ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲು ಸಂಸ್ಥೆಯು ನಿರ್ಧರಿಸಿದೆ ಎನ್ನಲಾಗಿದೆ.
=====================