ಕೊರೊನಾ ಆತಂಕದ ನಡುವೆ ನಡೆದ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಸರಣಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿದ್ದು, ಸರಣಿಯ ನಿರ್ಣಾಯಕ ಪಂದ್ಯವಾಗಿರುವ 3ನೇ ಟೆಸ್ಟ್ ಪಂದ್ಯ ಇಂದಿನಿಂದ (ಶುಕ್ರವಾರ) ಆರಂಭಗೊಳ್ಳಲಿದೆ.
ಮ್ಯಾನ್ಚೆಸ್ಟರ್‍ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ನಡೆಯುವ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಎರಡೂ ತಂಡಗಳು ಭರ್ಜರಿ ತಯಾರಿಯನ್ನೇ ಮಾಡಿಕೊಂಡಿದ್ದು, ಪಂದ್ಯವನ್ನು ಗೆದ್ದು “ವಿಸ್ಡನ್ ಟ್ರೋಫಿ” ಮುಡಿಗೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿವೆ.
ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ್ದ ವೆಸ್ಟ್ ಇಂಡೀಸ್ ಸೌತಾಂಪ್ಟನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಆದರೆ 3 ದಿನಗಳ ಹಿಂದೆ ಇದೇ ಮುಕ್ತಾಯಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಇಂಗ್ಲೆಂಡ್, 113 ರನ್ನುಗಳಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಸರಣಿಯ ಮೂರನೇ ಪಂದ್ಯ ಅತ್ಯಂತ ಕುತೂಹಲ ಮೂಡಿಸಿದೆ.
ಆದರೆ ಮ್ಯಾಂಚೆಸ್ಟರ್ ವಾತಾವರಣ ಟೆಸ್ಟ್ ಕ್ರಿಕೆಟಿಗೆ ಪ್ರಶಸ್ತವಾಗಿಲ್ಲ. ಮೊದಲ ದಿನ ಮೋಡ ಕವಿದ ವಾತಾವರಣವಿದ್ದು, ಅನಂತರದ ನಾಲ್ಕೂ ದಿನ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿರುವ ಇಂಗ್ಲೆಂಡಿಗೆ ಹಿನ್ನಡೆಯಾದೀತು ಎಂಬ ಆತಂಕ ಎದುರಾಗಿದೆ.
ಈ ಹಿಂದೆ 2018-19ರಲ್ಲಿ ತವರಿನಲ್ಲಿ ನಡೆದ ಸರಣಿಯನ್ನು 2-1ರ ಅಂತರದಿಂದ ಗೆದ್ದಿದ್ದ ವೆಸ್ಟ್ ಇಂಡೀಸ್ ವಿಸ್ಡನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ 3ನೇ ಪಂದ್ಯ ಡ್ರಾ ಆದರೆ ಈ ಪ್ರಶಸ್ತಿ ವಿಂಡೀಸ್ ಬಳಿಯೇ ಉಳಿಯಲಿದೆ. ಹೀಗಾಗಿ ವಿಸ್ಡನ್ ಟ್ರೋಫಿಯನ್ನು ಮರಳಿ ಪಡೆಯಬೇಕಾದರೆ ಇಂಗ್ಲೆಂಡ್ ಈ ಪಂದ್ಯವನ್ನು ಗೆಲ್ಲಬೇಕಾದ ಅಗತ್ಯತೆ ಇದೆ.