ಬೆಂಗಳೂರು, ಅ.17: ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬವಾದ ಇಂದು, ಸರ್ಜಾ ಕುಟುಂಬ ಹಾಗೂ ಪತ್ನಿ ಮೇಘನಾ ರಾಜ್ ಕುಟುಂಬ ಚಿರು ಅವರ ಸಮಾಧಿಯ ಬಳಿ ತೆರಳಿ ಪೂಜೆ ಸಲ್ಲಿಸಿದರು. ಚಿರು ಯಾವಾಗ ಮತ್ತೆ ಭೂಮಿಗೆ ವಾಪಸ್ ಬರಬೇಕು ಎಂದು ಇಚ್ಛಿಸುತ್ತಾರೋ ಅಂದು ನನ್ನ ಮಗುವಿನ ರೂಪದಲ್ಲಿ ಬರುತ್ತಾರೆ. ಅದನ್ನು ಅವರೇ ಇಚ್ಛಿಸಬೇಕು ನಾನು ಆ ಬಗ್ಗೆ ಏನೂ ಹೇಳಲಾಗುವುದಿಲ್ಲ ಎಂದು ನಟಿ ಮೇಘನಾ ರಾಜ್ ತಿಳಿಸಿದ್ದಾರೆ.
ಚಿರು ಹುಟ್ಟಿದ ದಿನದ ಪೂಜೆಗಾಗಿ ಅವರ ಸಮಾಧಿಗೆ ಪೂಜೆ ಸಲ್ಲಿಸಲು ತೆರಳಿರುವ ಚಿರು ಪತ್ನಿ ಮೇಘನಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚಿರು ಜನ್ಮದಿನದಂದೇ ಮಗುವಾಗಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ. ಅದನ್ನು ಚಿರು ಅವರೇ ನಿರ್ಧರಿಸಬೇಕು. ಅವರು ಯಾವಾಗ ನನ್ನ ಮಗುವಾಗಿ ವಾಪಸ್ ಬರಬೇಕು ಎಂದು ಇಚ್ಚಿಸುತ್ತಾರೋ ಅಂದು ಬರಲಿ. ನೋಡೋಣ ಎಂದು ಹೇಳಿದರು.
ಇನ್ನು ಸೀಮಂತ ಕಾರ್ಯಕ್ರಮವನ್ನು ಚಿರು ಕನಸಿನಂತೆ ಧ್ರುವ ಹಾಗೂ ನಮ್ಮ ತಂದೆ-ತಾಯಿ, ಕುಟುಂಬದವರು ನೆರವೇರಿಸಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ. ಈ ಬಗ್ಗೆ ಚಿರುಗೂ ಸಂತಸವಾಗಿರುತ್ತೆ. ಸೀಮಂತದ ದಿನ ನನಗೆ ತುಂಬಾ ಸ್ಪೆಷಲ್ ಡೇ ಎಂದು ಹೇಳಿದ್ದಾರೆ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರು. ಈ ಸಂದರ್ಭದಲ್ಲಿ ಮೇಘನಾ ಹಾಗೂ ಕುಟುಂಬಸ್ಥರು ಭಾವುಕರಾಗಿದ್ದಾರೆ.