ಬೆಂಗಳೂರು,ಸೆ.09: ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ಇಬ್ಬರು ಕೊಲೆ ಆರೋಪಿಗಳ ಮೇಲೆ ಫೈರಿಂಗ್ ನಡೆದಿದೆ. ಆಂದ್ರಳ್ಳಿ ಅಭಿ ಮತ್ತು ಹಿಟಾಚಿ ಪ್ರವೀಣ್ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪ್ರಮಾಣಿಕ ಹಾಗೂ ದಕ್ಷ ಅಧಿಕಾರಿ ಇನ್ಸ್ ಪೆಕ್ಟರ್ ಗೌತಮ್ ಹಾಗೂ ತಂಡ ಗುಂಡಿನ ದಾಳಿ ನಡೆಸಿದ್ದಾರೆ.
ಹಿಂದಿನ ದಿನ ರಾತ್ರಿ ಸುಂಕದಕಟ್ಟೆಯ ಹೆಗ್ಗನಹಳ್ಳಿ ಕ್ರಾಸ್ ಬಳಿ ಮಹೇಶ್ ಎಂಬಾತನನ್ನು ಆಂದ್ರಳ್ಳಿ ಅಭಿ ಮತ್ತು ಹಿಟಾಚಿ ಪ್ರವೀಣ್ ಅಟ್ಟಾಡಿಸಿಕೊಂಡು ಬರ್ಬರವಾಗಿ ಕೊಲೆ ಮಾಡಿದ್ದರು. ಕೊಲೆಯಾದ ಮಹೇಶ್ ಈ ಹಿಂದೆ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದ. 2014ರಲ್ಲಿ ತಾವರೆಕೆರೆಯಲ್ಲಿ ಕೊಲೆಯಾಗಿದ್ದ ಸೂರಿ ಎಂಬಾತನ ಕೊಲೆಯ ಪ್ರತೀಕಾರಕ್ಕೆ ಮಹೇಶ್ ನನ್ನು ಕೊಲೆಗೈದಿದ್ದಾರೆ. ಈ ಖಚಿತ ಮಾಹಿತಿಯೊಂದಿಗೆ ಅವರನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದು, ಶರಣಾಗುವಂತೆ ಸೂಚನೆಕೊಟ್ಟರೂ ಪ್ರಯೋಜನವಾಗಿರಲಿಲ್ಲ.
ಫೈರಿಂಗ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಇಬ್ಬರು ಆರೋಪಿಗಳ ಕಾಲಿಗೆ ಇನ್ಸ್ ಪೆಕ್ಟರ್ಗೌತಮ್ ಹಾಗೂ ತಂಡ ಗುಂಡು ಹಾರಿಸಿದರು. ಆಂದ್ರಳ್ಳಿ ಅಭಿ ಬಲಗಾಲಿಗೆ ಹಾಗೂ ಪ್ರವೀಣ್ ಎಡಗಾಲಿಗೆ ಫೈರಿಂಗ್ ಮಾಡಲಾಯಿತು. ಇವರಿಬ್ಬರೂ ಸ್ಲಂ ಭರತನ ಸಹಚರರಾಗಿ ಗುರುತಿಸಿಕೊಂಡವರು. ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲುಮಾಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..