ವಿಯೆನ್ನಾ, ನ. 3: ವಿಯೆನ್ನಾದ ಆರು ಕಡೆಗಳಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಐವರು ಮೃತಪಟ್ಟಿದ್ದರೆ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ವಿಯೆನ್ನಾದ ಸಿನಗಾಗ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಉಗ್ರರ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಸಿದ ಉಗ್ರರಲ್ಲಿ ಓರ್ವನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ಉಗ್ರನೊಂದಿಗೆ ಇನ್ನೂ ಹಲವು ಮಂದಿ ಉಗ್ರರು ಇರುವ ಶಂಕೆ ಇದ್ದು, ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ.
ಹಿಲ್ಟನ್ ಹೋಟೆಲ್‌ನಲ್ಲಿರುವ ಪ್ರವಾಸಿಗರನ್ನು ಈ ಉಗ್ರರ ತಂಡ ಬಂಧಿಯಾಗಿರಿಸಿದೆ ಎನ್ನಲಾಗಿದೆ. ಆಸ್ಟ್ರಿಯಾ ಸರ್ಕಾರ ಸೇನೆ ರವಾನಿಸಿದ್ದು, ಸದ್ಯ ವಿಯೆನ್ನಾ ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಈ ನಡುವೆ ವಿಯೆನ್ನಾದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಇಸ್ಮಾಮಿಸ್ಟ್ ಉಗ್ರರ ಸಂಘಟನೆಯ ಕೈವಾಡವಿರುವ ಬಗ್ಗೆ ಆಸ್ಟ್ರಿಯಾ ಸರ್ಕಾರ ಶಂಕೆ ವ್ಯಕ್ತಪಡಿಸಿದೆ. ಇನ್ನು ಉಗ್ರರ ದಾಳಿಗೆ ವಿಶ್ವದ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಭಯೋತ್ಪಾದನೆಯ ವಿರುದ್ದ ಆಸ್ಟ್ರೀಯ ಹೋರಾಟದೊಂದಿಗೆ ನಿಲ್ಲುವುದಾಗಿ ತಿಳಿಸಿದೆ.