ಲಕ್ನೋ: ಹತ್ರಾಸ್ ಪೈಶಾಚಿಕ ಕೃತ್ಯ ಮರೆಯಾಗೋ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಂದು ಘೋರ ಘಟನೆ ನಡೆದಿದೆ. ಇಲ್ಲಿನ ಬಲರಾಂಪುರದಲ್ಲಿ 22 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ಕೊಲೆ ಮಾಡಿದ್ದಾರೆ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಇಬ್ಬರು ದುರುಳರು ದಲಿತ ಜನಾಂಗಕ್ಕೆ ಸೇರಿದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಗಂಭೀರ ಸ್ಥಿತಿಯಲ್ಲಿ ಮನೆ ಸೇರಿದ್ದಾಳೆ. ಆದ್ರೆ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃಪಟ್ಟಿದ್ದಾಳೆ. ಈ ಬಗ್ಗೆ ಯುವತಿಯ ಕುಟುಂಬದವರು ದೂರು ದಾಖಲಿಸಿದ್ದಾರೆ.
ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಈಗಾಗಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಈ ಘಟನೆ ನಡೆದಿದೆ. ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಮೃತಪಟ್ಟ 19 ವರ್ಷ ಯುವತಿಯ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರ ವಿರೋಧದ ನಡುವೆಯೇ ಪೊಲೀಸರೇ ನೆರವೇರಿಸಿದ ಬಳಿಕ ಹತ್ರಾಸ್ ಗಡಿ ಭಾಗವನ್ನು ಮುಚ್ಚಲಾಗಿದ್ದು ಜಿಲ್ಲೆಯಲ್ಲಿ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಮಧ್ಯೆ ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಹತ್ರಾಸ್ ಗೆ 500 ಮೀ ದೂರದ ಬಲರಾಂಪುರದಲ್ಲಿ ನಡೆದಿದೆ. ಆರೋಪಿಗಳಾದ ಶಾಹಿದ್ ಮತ್ತು ಸಾಹಿಲ್ ಎಂಬವರನ್ನು ಬಂಧಿಸಲಾಗಿದೆ ಎಂದು ದೇವ್ ರಂಜನ್ ವರ್ಮ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯುವತಿ ಕುಟುಂಬದಿಂದ ದೂರು ಪಡೆದುಕೊಂಡ ಬಲರಾಂಪುರ ಪೊಲೀಸ ವರಿಷ್ಠಾಧಿಕಾರಿ ದೇವ್ ರಂಜನ್ ಇಬ್ಬರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಘಟನೆ ಬಗ್ಗೆ ಬಿ ಎಸ್ ಪಿ ವರಿಷ್ಠೆ ಮಾಯಾವತಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗೋರಖ್ ನಾಥ್ ಮಠಕ್ಕೆ ವಾಪಸ್ ಕಳುಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿ ಜೆ ಪಿ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿವೆ ಯೋಗಿ ಆದಿತ್ಯನಾಥ್ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.