ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಪ್ರಮಾಣ ವಚನ ಸ್ವೀಕರಿಸಲು ಕಾನೂನಿನ ತೊಡಕುಂಟಾಗಲಿದೆಯೇ? ಎಂಬ ಅನುಮಾನ ವ್ಯಕ್ತವಾಗಿದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡ, ಬಿಜೆಪಿ ಅಧಿಕಾರದ ಗದ್ದುಗೆ ಏರಲು ಕಾರಣರಾದ ಮಾಜಿ ಸಚಿವ ಎಚ್.ವಿಶ್ವನಾಥ್‍ಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದರು. ಇದರ ಬೆನ್ನಲ್ಲೇ ಮಾಜಿ ಸಚಿವ ವಿಶ್ವನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿದೆ.
ಆದರೆ, ಎಚ್.ವಿಶ್ವನಾಥ್ ಅವರು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದು ಕಾನೂನು ಬಾಹಿರ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲದ ಹೊರತು ಅಥವಾ ಈ ಬಾರಿಯ ವಿಧಾನ ಸಭೆ ಅವಧಿ ಮುಗಿಯುವವರೆಗೂ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಸ್ವತಃ ವಕೀಲರೂ ಆಗಿರುವ ವಿಶ್ವನಾಥ್ ಹೇಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲರಿಗೆ ಕನ್ನಡ, ಇಂಗ್ಲಿಷ್ ಬರುವುದಿಲ್ಲ:
ರಾಜ್ಯಪಾಲರಿಗೆ ಕನ್ನಡ, ಆಂಗ್ಲಭಾಷೆ ಎರಡೂ ಬರುವುದಿಲ್ಲ. ಹೀಗಾಗಿ, ಕಾನೂನು ತಜ್ಞರ ಜೊತೆ ಸಮಾಲೋಚಿಸದೆ ವಿಶ್ವನಾಥ್ ಆಯ್ಕೆಗೆ ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ರಾಜ್ಯಪಾಲರು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುವುದು ರಾಜ್ಯ ರಾಜಕೀಯದ ದುರಂತವಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ ವಿಶ್ವನಾಥ್, ಪರಿಷತ್ ಸ್ಥಾನವಲ್ಲ ಯಾವುದೇ ನಿಗಮ, ಮಂಡಳಿ ಅಧ್ಯಕ್ಷರಾಗಿ ಕೂಡ ಆಯ್ಕೆ ಆಗುವಂತಿಲ್ಲ ಎಂದರು. ಬಾಂಬೆ ಡೈರಿ ಎಫೆಕ್ಟ್:
ಬಾಂಬೆ ಡೈರಿ ಪುಸ್ತಕದ ಬ್ಲಾಕ್‌ಮೇಲ್‌ನಿಂದ ಅವರಿಗೆ ಈ ಸ್ಥಾನ ಸಿಕ್ಕಿದೆ. ಹುಣಸೂರಿನಿಂದ ಬಾಂಬೆವರೆಗೆ ಹೋಗಿದ್ದ ಇವರ ಪ್ರಯಾಣ ಫಲವೇ ಈ ಸ್ಥಾನ. ಪುಸ್ತಕ ಬಿಡುಗಡೆ ಮಾಡುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿದ ಶಾಸಕ ಸಾ.ರಾ. ಮಹೇಶ್, ವಿಶ್ವನಾಥ್ ಅವರ ಆಯ್ಕೆ ಅಸಿಂಧು ಎಂಬ ಬಗ್ಗೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಜತೆಗೆ ನ್ಯಾಯಾಲಯದಿಂದ ಪಡೆದಿರುವ ೧೧೦ ಪುಟಗಳ ತೀರ್ಪಿನ ಪ್ರತಿಯನ್ನು ರಾಜ್ಯಪಾಲರು, ಸ್ಪೀಕರ್ ಹಾಗೂ ಕಾರ್ಯದರ್ಶಿಗೆ ಕಳುಹಿಸಿಕೊಡುತ್ತೇನೆ. ಬೇರೆಯವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದರೆ, ನಾನು ಈ ವಿಚಾರವನ್ನು ಜನತಾ ನ್ಯಾಯಾಲಯದ ಮುಂದಿಡುತ್ತೇನೆ ಎಂದಿದ್ದಾರೆ.