ಅಯೋಧ್ಯೆಯ ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದರು.
ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಅಯೋಧ್ಯೆಗೆ ಆಗಮಿಸಿದರು. ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು.
ಮೊದಲಿಗೆ ಅಯೋಧ್ಯೆಯಲ್ಲಿರುವ ಹನುಮಾನ್ ಗುಡಿಯ ಹನುಮಾನ್ ದೇಗುಲಕ್ಕೆ ತೆರಳಿ ರಾಮಭಂಟ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಳ್ಳಿಯ ಕಿರೀಟಧರಿಸಿ ಸನ್ಮಾನಿಸಲಾಯಿತು. ನಂತರ ರಾಮನ ದೇವಸ್ಥಾನಕ್ಕೆ ತೆರಳಿದ ಮೋದಿ, ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಸಾಷ್ಟಾಂಗ ನಮಸ್ಕಾರ ಮಾಡಿದರು.
ಇದೇ ವೇಳೆ ಶಿಲಾನ್ಯಾಸದ ಸ್ಮರಣಾರ್ಥ ಪಾರಿಜಾತ ಗಿಡ ನೆಟ್ಟು, ನೀರೆರೆದರು. ಈ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ ಬಳಿಕ 12.30ಕ್ಕೆ ಆರಂಭಗೊಂಡ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಅಭಿಜಿತ್ ಮುಹೂರ್ತದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೊದಲ ಬೆಳ್ಳಿ ಇಟ್ಟಿಗೆ ಪ್ರತಿಷ್ಠಾಪಿಸಿದರು.