ಮುಂಬೈ, ಮಾ. 08: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬ ಹೆಗ್ಗಳಿಕೆ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2021ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 9ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಚೆನ್ನೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಚೆನ್ನೈನಲ್ಲಿ ಈ ಸಾಲಿನ ಐಪಿಎಲ್ ಕ್ರಿಕೆಟ್ ಪಂದ್ಯ ಆರಂಭಿಸಲಾಗುವುದು. ಮೇ 30 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೂರ್ನಿಯ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯ ನಡೆಯಲಿದೆ ಎಂದು ಹೇಳಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅಹಮಾದಾಬಾದ್, ಬೆಂಗಳೂರು, ಚೆನ್ನೈ, ನವದೆಹಲಿ, ಮುಂಬಯಿ ಮತ್ತು ಕೋಲ್ಕತಾದಲ್ಲಿ ಪಂದ್ಯಾವಳಿ ನಡೆಯಲಿದೆ.
ಐಪಿಎಲ್ ಗೌವರ್ನಿಂಗ್ ಕೌನ್ಸಿಲ್ ಭಾನುವಾರ, ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 56 ಲೀಗ್ ಪಂದ್ಯಗಳು ನಡೆಯಲಿದ್ದು, 11 ಡಬಲ್ ಹೆಡರ್ ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3-30ಕ್ಕೆ ಮೊದಲ ಪಂದ್ಯ ನಡೆದರೆ, ರಾತ್ರಿ 7-30ಕ್ಕೆ 2ನೇ ಪಂದ್ಯ ನಡೆಯಲಿದೆ.