13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರ್ಜರಿ ಆರಂಭ ದೊರೆತ ಬೆನ್ನಲ್ಲೇ, ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಶುರುವಾಗಿದ್ದು, ಐಪಿಎಲ್-2020 ಬೆಟ್ಟಿಂಗ್ ದಂಧೆ ಆರೋಪದ ಮೇಲೆ ಸಿಸಿಬಿ ಪೊಲೀಸರು ಬುಧವಾರ ಆರು ಮಂದಿಯನ್ನು ಬಂಧಿಸಿದ್ದಾರೆ.
ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಬಾಣಸವಾಡಿ ಮತ್ತು ಮಲ್ಲೇಶ್ವರಂನಲ್ಲಿ ಆರು ಮಂದಿಯನ್ನು ಬಂಧಿಸಿ ಅವರ ಬಳಿಯಿಂದ 6 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಎರಡು ಕೇಸುಗಳು ದಾಖಲಾಗಿದೆ ಎಂದು ನಗರ ಅಪರಾಧ ದಳದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.