ನವದೆಹಲಿ ಆ 26 : ಇತ್ತೀಚೆಗಷ್ಟೆ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದ್ದು, ಇದರಿಂದ ಭಾರತೀಯರು ಹಾಗೂ ಸರ್ಕಾರ ಕೂಡ ಖುಷಿಗೊಂಡಿವೆ. ಈ ನಡುವೆ 2036 ಆಥವಾ 2040ಕ್ಕೆ ಭಾರತದಲ್ಲಿ ಒಲಂಪಿಕ್ ಆಯೋಜನೆಗೆ ಸರ್ಕಾರ ಆ ನಿಟ್ಟಿನಲ್ಲಿಯೂ ಹೆಜ್ಜೆ ಹಾಕುತ್ತಿದೆ.
2032 ರ ಒಲಿಂಪಿಕ್ಸ್ ಆಸ್ಟ್ರೇಲಿಯಾದಲ್ಲಿ ನಡೆಯುವುದು ಖಚಿತವಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್ ಸ್ಪಷ್ಟೀಕರಣ ನೀಡಿದ್ದಾರೆ.
ಆದರೆ 2036 ಮತ್ತು 2040 ನೇ ಒಲಿಂಪಿಕ್ಸ್ ಆತಿಥ್ಯ ವಹಿಸಲು ಹಲವು ರಾಷ್ಟ್ರಗಳು ಪೈಪೋಟಿಯಲ್ಲಿವೆ. ಈ ಪೈಕಿ ಭಾರತವೂ ಸ್ಪರ್ಧೆಯಲ್ಲಿದೆ. ಭಾರತವೂ 2036 ಅಥವಾ 2040 ನೇ ಒಲಿಂಪಿಕ್ ಆಯೋಜಿಸಲು ಆಸಕ್ತಿ ತೋರಿಸಿದೆ. ಭಾರತದ ಜೊತೆಗೆ ಕತಾರ್, ಇಂಡೋನೇಷ್ಯಾ, ಜರ್ಮನಿ ದೇಶಗಳೂ ಸ್ಪರ್ಧೆಯಲ್ಲಿವೆ ಎಂದಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಕೂಡಾ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ನಡೆದ ಐಒಸಿ ವಿಡಿಯೋ ಕಾನ್ಛರೆನ್ಸ್ ಸಭೆಯಲ್ಲಿ ಭಾರತವು 2036 ಅಥವಾ ಅದರ ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.