ಬೆಂಗಳೂರು, ನ. 5: ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುವ “ಕನ್ನಡ ಕಾಯಕ ವರ್ಷಾಚರಣೆ-೨೦೨೦ʼʼ ರ ಲಾಂಛನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ವಿಧಾನಸೌಧದಲ್ಲಿ ಇಂದು ಬಿಡುಗಡೆಗೊಳಿಸುವ ಮೂಲಕ ಕನ್ನಡ ಕಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರು, ಕಾರ್ಯಕ್ರಮವನ್ನು ಒಂದು ವರ್ಷಪೂರ್ತಿ ಅರ್ಥಪೂಣವಾಗಿ ಆಚರಿಸಲು ಹಲವು ಪ್ರತ್ಯೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಡು-ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಜ್ಯದ ಪ್ರಾತಿನಿಧಿಕ ಸಂಸ್ಥೆಯಾಗಿ, ಕನ್ನಡವನ್ನು ಉಳಿಸಿ, ಬೆಳೆಸುವ ಸಂಬಂಧ ರಚನಾತ್ಮಕ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಕನ್ನಡ ಭಾಷಾ ಬೆಳವಣಿಗೆಯ ಹಿತದೃಷ್ಟಿಯಿಂದ ಆಡಳಿತದಲ್ಲಿ ಕನ್ನಡ, ಶಿಕ್ಷಣದಲ್ಲಿ ಕನ್ನಡ, ತಂತ್ರಜ್ಞಾನದಲ್ಲಿ ಕನ್ನಡ, ನ್ಯಾಯಾಂಗದಲ್ಲಿ ಕನ್ನಡ, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಹೊರದೇಶಗಳಲ್ಲಿ ಕನ್ನಡ ಪಸರಿಸುವಿಕೆ ಹೀಗೆ ಹತ್ತು-ಹಲವು ಉಪಕ್ರಮಗಳನ್ನು ಹಮ್ಮಿಕೊಂಡಿದ್ದು ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಪಾರದರ್ಶಕ ಆಡಳಿತಕ್ಕೆ ಚಾಲನೆ ನೀಡಲಾಗಿದೆ. ಅದೇ ರೀತಿ ತಂತ್ರಜ್ಞಾನ ಆಡಳಿತದಲ್ಲಿ ಕನ್ನಡವನ್ನು ಹೆಚ್ಚೆಚ್ಚು ಬಳಸುವ ಮೂಲಕ ಕನ್ನಡ ಭಾಷೆಗೆ ವಿಶ್ವಮಾನ್ಯತೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಅಧ್ಯಕ್ಷರು ಹೇಳಿದರು.
ಉಚಿತ ಇ-ಮೈಲ್ ಸೇವೆಯನ್ನು ಎಲ್ಲ ಕನ್ನಡಿಗರಿಗೆ ನೀಡುವ ಸದುದ್ದೇಶದಿಂದ ಕರ್ನಾಟಕ ಸರ್ಕಾರವು ಈಗಿರುವ “.ಭಾರತ್“ (ಡಾಟ್ ಭಾರತ್) ಸೇವೆಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ಎಲ್ಲ ಜಾಲತಾಣ (ವೆಬ್ಸೈಟ್)ಗಳನ್ನು ಕನ್ನಡಕ್ಕೆ ಬದಲಾಯಿಸಿದರೆ ಕನ್ನಡದಲ್ಲೇ ಇ-ಮೈಲ್ ಸೇವೆಯನ್ನೂ ನೀಡಬಹುದು (ಉದಾಹರಣೆಗೆ ಮುಖ್ಯಮಂತ್ರಿ@ಕರ್ನಾಟಕ.ಭಾರತ).
ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜಾಲತಾಣಗಳಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಬಳಸುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಗೂ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಲಿದ್ದು, “ಕನ್ನಡ ಕಾಯಕ ವರ್ಷ”ದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಾಧಿಕಾರ ಅಧ್ಯಕ್ಷರು ತಿಳಿಸಿದರು.
ಕಣಜ ಕನ್ನಡ ಜಾಲತಾಣಕ್ಕೆ ಕಾಯಕಲ್ಪ ನೀಡುವುದು, ಜಾಗತಿಕ ತಂತ್ರಜ್ಞಾನ ವೇದಿಕೆಗಳಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಸದಸ್ಯತ್ವ ಅಭಿಯಾನವನ್ನು ನಡೆಸಲಾಗುವುದು. ಅಲ್ಲದೆ ಬಹುಮುಖ್ಯವಾಗಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಂತಕಟ್ಟಡ ಮತ್ತು ಸ್ವಾಯತ್ತತೆಯ ಅಗತ್ಯವಿದ್ದು, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಮೈಸೂರು ವಿವಿಯಲ್ಲಿ ನಾಲ್ಕು ಎಕರೆಗೂ ಹೆಚ್ಚಿನ ಪ್ರದೇಶ ಮತ್ತು ತಾತ್ಕಾಲಿಕ ಬಳಕೆಗೆ ವಿಸ್ತಾರವಾದ ಕಚೇರಿಯನ್ನು ಗುರುತಿಸಲಾಗಿದ್ದು, ಶಾಸ್ತ್ರೀಯ ಕನ್ನಡ ಕೇಂದ್ರದ ಸ್ವಾಯತ್ತ ಸ್ಥಾನಮಾನಕ್ಕೆ ಎಲ್ಲ ಪ್ರಯತ್ನಗಳನ್ನೂ ನಡೆಸಿರುವುದಾಗಿ ನಾಗಾಭರಣ ಅವರು ಮಾಹಿತಿ ನೀಡಿದರು.
ನೂತನ ಶಿಕ್ಷಣ ನೀತಿಯನ್ವಯ ಪ್ರಾಥಮಿಕ ಹಂತದ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ರೂಪಿಸಲು ಅಗತ್ಯ ಕಾನೂನು ಜಾರಿಗೊಳಿಸುವುದು ಹಾಗೂ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಹಂತ ಹಂತವಾಗಿ ಜಾರಿಗೊಳಿಸಲು ಕಾರ್ಯಕ್ರಮ ರೂಪಿಸಲಾಗುವುದು, ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡುವ ಮಸೂದೆ ರೂಪಿಸುವ ಮೂಲಕ ಕರೋನಾದಿಂದ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರಿಗೆ ಜೀವನೋತ್ಸಾಹ ತುಂಬುವುದು ಪ್ರಾಧಿಕಾರದ ಆಶಯವಾಗಿದೆ ಎಂದಿರುವ ಪ್ರಾಧಿಕಾರದ ಅಧ್ಯಕ್ಷರು, ಸರ್ಕಾರಿ ಮುದ್ರಣಾಲಯ ಹಾಗೂ ಸರ್ಕಾರಿ ಇಲಾಖೆಗಳು ಮುದ್ರಿಸುವ ತಲೆಬರಹಗಳು (ಲೆಟರ್ ಹೆಡ್), ನಮೂನೆಗಳು, ಪೂರಕ ಸಾಮಗ್ರಿಗಳು, ಪ್ರಕಟಣೆಗಳು, ಜಾಹಿರಾತುಗಳಲ್ಲಿ “ಕನ್ನಡ ಕಾಯಕ ವರ್ಷ 2020-21’’ರ ಲಾಂಛನವನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು, ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಬಾಳೆಕುಂದ್ರಿ, ಅಬ್ದುಲ್ ರೆಹಮಾನ್ ಪಾಷಾ, ಡಾ.ಗುಬ್ಬಿಗೂಡು ರಮೇಶ್, ಡಾ.ಕಿಶೋರ್, ಸುರೇಶ್ ಬಡಿಗೇರ್, ಕಬ್ಬಿನಾಲೆ ವಸಂತ ಭಾರದ್ವಾಜ್, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಹಾಗೂ ಕನ್ನಡ ಕಾಯಕ ಪಡೆಯ ಎಲ್ಲ ಜಿಲ್ಲೆಯ ಪದಾಧಿಕಾರಿಗಳು ಜಾಲತಾಣ ಸಭೆಯಲ್ಲಿ ಪಾಲ್ಗೊಂಡಿದ್ದರು.