- ಕರ್ನಾಟಕದಲ್ಲಿ ಇನ್ಮುಂದೆ ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಬ್ರೇಕ್
- ಇದರಿಂದ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುವ ಸಂಭವ (Sirens banned during VIP traffic in Karnataka)
- ಅಂಬ್ಯುಲೆನ್ಸ್, ಪೊಲೀಸ್ , ಅಗ್ನಿಶಾಮಕ ವಾಹನಗಳು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಲು ಅನುಮತಿ
Bengaluru: ಕರ್ನಾಟಕದಲ್ಲಿ ಇನ್ಮುಂದೆ ಗಣ್ಯ ವ್ಯಕ್ತಿಗಳು (VIP) ಸಂಚಾರ ಮಾಡುವ ವೇಳೆ ಸೈರನ್ (siren) ಬಳಕೆ ಮಾಡುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ(Dr. M.A. Saleem) ಅವರು ಇಂದು ಆದೇಶ ಹೊರಡಿಸಿದ್ದಾರೆ.
ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆ ಹಾಗೂ ದೃಷ್ಟಿಯಿಂದ ಸೈರನ್ ಬಳಕೆ ನಿಷೇಧಿಸಲಾಗಿದೆ.
ಅಷ್ಟೇ ಅಲ್ಲದೆ ಸಾಮಾನ್ಯವಾಗಿ ವಿಐಪಿ ವ್ಯಕ್ತಿಗಳು ಎಲ್ಲೆಡೆ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಎಲ್ಲಿಂದ ಎಲ್ಲಿಗೆ ಸಂಚಾರ ಮಾಡುತ್ತಿದ್ದಾರೆ ಎಂಬ ಕುರಿತು ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುತ್ತದೆ.
ಅದರಿಂದ ಏನಾದರೂ ಅವಘಡಗಳು ಸಂಭವಿಸಬಹುದು ಇಲ್ಲವೇ ಗಣ್ಯ ವ್ಯಕ್ತಿಗಳ ಪ್ರಾಣಕ್ಕೆ ಸಂಚಕಾರ ತರಬಹುದು. ಹೀಗೆ ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆ.
ಇದರಿಂದಾಗಿ ವಿಐಪಿ ಸಂಚಾರದ ವೇಳೆಯಲ್ಲಿ ಅವರು ಬಳಸುವ ವಾಹನಗಳಿಗೆ ಸೈರನ್ ಬಳಕೆ ಮಾಡದಂತೆ ಡಿಜಿ, ಐಜಿಪಿ (IGP) ಆದೇಶ ಹೊರಡಿಸಿದ್ದಾರೆ.
ಜನಸಾಮಾನ್ಯರು, ವಿಧ್ಯಾರ್ಥಿಗಳು ವಯಸ್ಸಾದವರು ರಸ್ತೆಯಲ್ಲಿ ಸಂಚರಿಸುವಾಗ ಸಾರ್ವಜನಿಕ ರಸ್ತೆಗಳ ಮೇಲೆ ಹಠಾತ್ತಾಗಿ ಸೈರನ್ ಸದ್ದು ಕೇಳಿ ಬಂದರೆ ತೊಂದರೆ ಉಂಟಾಗುತ್ತದೆ.
ಅದರಲ್ಲೂ ಆಸ್ಪತ್ರೆ, ಶಾಲೆ ಮುಂತಾದ ಕಡೆಗಳನ್ನು ದಾಟಿ ಸಂಚರಿಸುವಾಗ ಅಲ್ಲಿದ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ.

ಅಷ್ಟೇ ಅಲ್ಲದೆ ಆ ಸದ್ದಿನಿಂದ ರೋಡಿನಲ್ಲಿ ಸಂಚರಿಸುವ ಇತರ ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತದೆ.
ಸಡನ್ ಆಗಿ ಕೇಳಿಬರುವ ಸೈರನ್ ಸದ್ದಿನಿಂದ ವಾಹನ ಸವಾರರ ಮನಸ್ಸಿಗೆ ಉದ್ವಿಗ್ನತೆ ಉಂಟಾಗಿ ಚಾಲಕರು ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಿಸಿ ಅಪಘಾತ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ಹಾಗಾಗಿ ಇನ್ಮುಂದೆ ವಿಐಪಿ ವ್ಯಕ್ತಿಗಳ ಸಂಚಾರದ ವೇಳೆಯಲ್ಲಿ, ತುರ್ತು ಚಲನವಲನದ ಅವಶ್ಯಕತೆಗಳಿಗೆಕೇವಲ ವೈರ್‌ಲೆಸ್ ಕಮ್ಯುನಿಕೇಶನ್ ಮುಖಾಂತರ ಮಾಹಿತಿ ವಿನಿಮಯ ಮಾಡಬೇಕು.
ಅಷ್ಟಕ್ಕೂ ಈ ಸದ್ದು ಮಾಡುವ ಸೈರನ್‌ಗಳನ್ನು ಕೇವಲ ಅಂಬ್ಯುಲೆನ್ಸ್, ಪೊಲೀಸ್ , ಅಗ್ನಿಶಾಮಕ ವಾಹನಗಳಲ್ಲಿ ಅದರಲ್ಲೂ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರವೇ ಬಳಸಬೇಕು .
ಕಂಡಕಂಡಲ್ಲಿ ಬಳಸುವಂತಿಲ್ಲ ಎಂದು ಡಿಜಿ, ಐಜಿಪಿ ಎಂ.ಎ.ಸಲೀಂ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸುಪ್ರೀಂಕೋರ್ಟ್ ಹೊರಡಿಸಿರುವ ಆದೇಶದ ಪ್ರಕಾರ ಕೇವಲ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಇನ್ಯಾವ ವಾಹನಗಳೂ ಕೂಡ ಸೈರನ್ ಬಳಸುವಂತಿಲ್ಲ.
ಅದರಂತೆ ಇನ್ಮುಂದೆ ಪೊಲಿಸ್ ಅಧಿಕಾರಿಗಳು ಕೂಡ ಸೈರನ್ ಬಳಸುವಂತಿಲ್ಲ.
ಕೇವಲ ತುರ್ತು ಸಂದರ್ಭಗಳಲ್ಲಿ ಮಾತ್ರ ಅಂಬ್ಯುಲೆನ್ಸ್ ಹಾಗೂ ಅಗ್ನಿ ಶಾಮಕದಳ ವಾಹನಗಳು ಮಾತ್ರವೇ ಈ ಸೈರನ್ ಬಳಕೆ ಮಾಡಬಹುದು.
ಒಂದು ವೇಳೆ ಈ ನಿಯಮ ಯಾರಾದರೂ ಉಲ್ಲಂಘಿಸಿದರೆ ಮೋಟರ್ ವಾಹನ ಕಾಯದೆ ಅಡಿಯಲ್ಲಿ ಅಂತಹವರಿಗೆ 190 ಪ್ರಕಾರ ದಂಡ ಜತೆಗೆ ಮೂರು ತಿಂಗಳು ಜೈಲು ಶಿಕ್ಷೆಯನ್ನು ಕೂಡ ವಿಧಿಸಲಾಗುವುದು ಎಂದಿದ್ದಾರೆ.
ಇದನ್ನು ಓದಿ : ಟ್ಯಾಕ್ಸ್ ಜಟಾಪಟಿ, ಬೇಸತ್ತ ಅಂಗಡಿ ಮಾಲಿಕರು, ತೆರಿಗೆ ಮನ್ನ ಮಾಡದೇ ಇದ್ದರೆ ಬೇಕರಿ, ಅಂಗಡಿ ಬಂದ್
ಹಾಗಾಗಿ ಮುಂದಿನ ದಿನಗಳಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರವೇ ಸೈರನ್ ಬಳಕೆ ಅನುಮೋದಿಸಲಾಗುತ್ತದೆ ಎಂದಿದ್ದಾರೆ.(Sirens banned during VIP traffic in Karnataka)