ಟಾಲಿವುಡ್ ಯಂಗ್ ‘ರೆಬಲ್ ಸ್ಟಾರ್’ ಪ್ರಭಾಸ್, ಕಾಡೊಂದನ್ನು ದತ್ತು ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಹೈದರಾಬಾದ್ ಸಮೀಪದ ಕಾಜಿಪಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಪ್ರಭಾಸ್ ದತ್ತು ಪಡೆದಿದ್ದಾರೆ. 1650 ಎಕರೆ ವಿಸ್ತೀರ್ಣವಿರುವ ಈ ಮೀಸಲು ಅರಣ್ಯ ಪ್ರದೇಶವನ್ನು ದತ್ತು ಪಡೆದಿರುವ ಬಾಹುಬಲಿ ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಿದ್ದಾರೆ. ಬಾಲ್ಯದಿಂದಲೂ ಪರಿಸರಪ್ರೇಮಿಯಾದ ಪ್ರಭಾಸ್, ಅರಣ್ಯ ದತ್ತು ಪಡೆಯುವ ಮೂಲಕ ತಮ್ಮ ಕಾಳಜಿ ತೋರಿದ್ದಾರೆ.
ಬಿಎಸ್‍ಆರ್ ಪಕ್ಷದ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೋಗಿನಪಲ್ಲಿ, ತೆಲಂಗಾಣ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ‘ಗ್ರೀನ್ ಇಂಡಿಯಾ ಚಾಲೆಂಜ್’ ಭಾಗವಾಗಿ ಅರಣ್ಯ ಪ್ರದೇಶವನ್ನು ದತ್ತು ಪಡೆದಿರುವ ಪ್ರಭಾಸ್, ಅರಣ್ಯ ಪ್ರದೇಶದ ಅಭಿವೃದ್ಧಿಗಾಗಿ 2 ಕೋಟಿ ರೂ. ಹಣವನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಈ ಕುರಿತು ನಟ ಪ್ರಭಾಸ್, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ನಟ ಪ್ರಭಾಸ್ ಸಹಾಯಹಸ್ತ ಚಾಚಿರುವುದು ಇದೇ ಮೊದಲೇನಲ್ಲ. ಕೊರೊನಾ ಸಮಯದಲ್ಲೂ ಬರೋಬ್ಬರಿ ನಾಲ್ಕು ಕೋಟಿ ರೂ. ದೇಣಿಗೆ ನೀಡುವ ಮೂಲಕ ಪ್ರಭಾಸ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಪ್ರಧಾನಮಂತ್ರಿ ನ್ಯಾಷನಲ್ ರಿಲೀಫ್ ಫಂಡ್ಗೆ 3 ಕೋಟಿ ರೂಪಾಯಿ ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯ ಸರ್ಕಾರಗಳಿಗೆ ತಲಾ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.