ಬೆಂಗಳೂರು ನ. 4: ರಾಜ್ಯ ಸರ್ಕಾರಕ್ಕೆ ಈ ವರ್ಷ ಕಾವೇರಿ ನದಿ ನೀರಿನ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ತಮಿಳುನಾಡಿಗೆ ಅಕ್ಟೋಬರ್ ಅಂತ್ಯದವರೆಗೂ ಬಿಡುಗಡೆಯಾಗುವ ನೀರಿಗಿಂತಲೂ ಹೆಚ್ಚು ನೀರು ಹರಿದು ಹೋಗಿದ್ದು, ಈ ವರ್ಷ ಕಾವೇರಿ ಕೊಳ್ಳದ ರೈತರು ಹಾಗೂ ರಾಜ್ಯ ಸರ್ಕಾರಕ್ಕೆ ಕಾವೇರಿ ತಲೆನೋವಿಲ್ಲ.
ಪ್ರತಿ ವರ್ಷ ಮಳೆಗಾಲ ಮುಕ್ತಾಯವಾಗುತ್ತಿರುವಂತೆ ಕಾವೇರಿಯ ಅಣೆಕಟ್ಟೆಗಳಲ್ಲಿನ ನೀರಿನ ಪ್ರಮಾಣದ ಆಧಾರದಲ್ಲಿ (ಸುಪ್ರೀಂಕೋರ್ಟ್ ಆದೇಶದನ್ವಯ) ಮುಂದಿನ ಎಂಟು ತಿಂಗಳು ತಮಿಳುನಾಡಿಗೆ ನೀರು ಹರಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸಮಸ್ಯೆಯೇ ಎದುರಾಗುತ್ತಿತ್ತು. ಆದರೆ ಈ ವರ್ಷ ಉತ್ತಮವಾದ ಮಳೆಯಾಗಿರುವುದರಿಂದ ಕಾವೇರಿ ಕೊಳ್ಳದ ಭಾಗದಲ್ಲಿ, ಕಬಿನಿ, ಹೇಮಾವತಿ ನದಿಗಳು ಭರ್ತಿಯಾಗಿದ್ದು,ಈ ಪ್ರದೇಶದಲ್ಲಿ ಅತ್ಯಧಿಕ ನೀರು ಹರಿದಿದೆ. ಈ ಪ್ರದೇಶದಲ್ಲಿ ಮಳೆಯಾಗಿರುವುದರಿಂದಲೇ ತಮಿಳುನಾಡಿಗೆ ಪ್ರತಿ ತಿಂಗಳು ಬಿಡಬೇಕಾದ ನೀರಿಗಿಂತಲೂ ಹೆಚ್ಚು ನೀರು ಈಗಾಗಲೇ ತಮಿಳುನಾಡಿನ ಬಿಳಿಗುಂಡ್ಲುವಿನಲ್ಲಿ ದಾಖಲಾಗಿದೆ.
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ 2018ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ದಂತೆ ತಮಿಳುನಾಡಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ 177 ಟಿಎಂಸಿ ಅಡಿ ನೀರು ಹರಿಸಬೇಕು. ಜೂನ್‌ನಿಂದ ಮೇ ವರೆಗೂ ಮಾನ್ಸೂನ್ ವರ್ಷದಲ್ಲಿ ಪ್ರತಿ ತಿಂಗಳು ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಗದಿ ಪಡಿಸಲಾಗಿದ್ದು, ಈ ವರ್ಷದ ಮಾನ್ಸೂನ್ ವರ್ಷದಲ್ಲಿ ಜೂನ್‌ನಿಂದ ಅಕ್ಟೋಬರ್‌ವರೆಗೆ 143. 82 ಟಿಎಂಸಿ ನೀರು ಹರಿಸಬೇಕಾಗಿದೆ.
ಆದರೆ, ಈಗಾಗಲೇ ನ.1ರವರೆಗೆ ಕೆಆರ್‌ಎಸ್‌ನಿಂದ 160.603 ಟಿಎಂಸಿ ನೀರು ತಮಿಳುನಾಡಿನ ಬಿಳಿಗುಂಡ್ಲುವಿನಲ್ಲಿ ನೀರು ಸಂಗ್ರಹವಾಗಿರುವುದು ದಾಖಲಾಗಿದೆ. ಅಕ್ಟೋಬರ್ ವರೆಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವುದಕ್ಕಿಂತಲೂ 17 ಟಿಎಂಸಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗಿದೆ. ನವೆಂಬರ್ ತಿಂಗಳಲ್ಲಿ ಬಿಡಬೇಕಿರುವ 13.76 ಟಿಎಂಸಿ ನೀರು ಕೂಡ ಈಗಾಗಲೇ ಹರಿದು ಹೋಗಿದ್ದು ರಾಜ್ಯ ಸರ್ಕಾರ ನಿರಾಳವಾಗುವಂತೆ ಮಾಡಿದೆ. ಅಲ್ಲದೇ ಕಾವೇರಿ ನದಿ ತಟದಲ್ಲಿ ಮಳೆಯಾಗುತ್ತಿದ್ದುದರಿಂದ ಪ್ರತಿ ದಿನ ಸುಮಾರು 6000 ದಿಂದ 8000 ಕ್ಯೂಸೆಕ್ ನೀರು ನದಿಯಿಂದಲೇ ಹರಿದು ಹೋಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಅಣೆಕಟ್ಟೆಯಿಂದ ನೀರು ಹರಿಸುವ ಗೋಜಿಗೆ ಹೋಗಿಲ್ಲ.
ನವೆಂಬರ್‌ನಿಂದ ಮುಂದಿನ ಜೂನ್ ವರೆಗೂ ರಾಜ್ಯದಿಂದ ತಮಿಳುನಾಡಿಗೆ ಕೇವಲ 17 ಟಿಎಂಸಿ ನೀರು ಮಾತ್ರ ಬಿಡಬೇಕಿದೆ. ನವೆಂಬರ್‌ನಲ್ಲಿ 13.78 ಟಿಎಂಸಿ, ಡಿಸೆಂಬರ್‌ನಲ್ಲಿ 7.35 ಟಿಎಂಸಿ,2021 ರ ಜನವರಿಯಲ್ಲಿ 2.76 ಟಿಎಂಸಿ, ಫೆಬ್ರವರಿಯಲ್ಲಿ 2.50 ಟಿಎಂಸಿ, ಮಾರ್ಚ್ ನಲ್ಲಿ 2.50, ಏಪ್ರಿಲ್‌ನಲ್ಲಿ 2.50 ಹಾಗೂ ಮೇ ತಿಂಗಳಲ್ಲಿ 2.50 ಟಿಎಂಸಿ ನೀರು ಹರಿಸಬೇಕಿದೆ. ಇನ್ನೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಹಾಗೂ ರಾಜ್ಯದ ರೈತರ ಬೆಳೆಗಳಿಗೆ ನೀರು ಹರಿಸಿದಾಗ ಹೆಚ್ಚುವರಿ ನೀರು ನದಿಗೆ ಹರಿದು ತಮಿಳುನಾಡಿಗೆ ಹೋಗುವುದರಿಂದ ಉಳಿದ 17 ಟಿಎಂಸಿ ನೀರು ಜಲಾಶಯದಿಂದ ಬಿಡದಿದ್ದರೂ ಹರಿದು ಹೋಗುವ ಸಾಧ್ಯತೆ ಇದೆ. ಈ ವರ್ಷದಲ್ಲಿ ಕಾವೇರಿ ನೀರು ಬಿಡುವ ಕುರಿತು ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿ ತಿಂಗಳು ಆಯಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಆದೇಶದಂತೆ ಹಂಚಿಕೆಯಾಗಿರುವ ನೀರನ್ನು ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಅಧಿಕಾರಿಗಳನ್ನೊಳಗೊಂಡ ಕಾವೇರಿ ನೀರು ನಿರ್ವಹಣಾ ಮಂಡಳಿ ನಿರ್ದೇಶನದಂತೆ ತಮಿಳು ನಾಡಿಗೆ ನೀರು ಬಿಡಲಾಗುತ್ತಿದ್ದು, ಯಾವುದೇ ರೀತಿಯ ಗೊಂದಲ ಉಂಟಾಗದAತೆ ನೋಡಿಕೊಳ್ಳಲಾಗುತ್ತಿದೆ ಎಂದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ತಮಿಳು ನಾಡಿಗೆ ನೀರು ಬಿಡಲು ಯಾವುದೇ ತೊಂದರೆಯಾಗದಿರುವುದರಿAದ ಬೇಸಿಗೆಯಲ್ಲಿ ಕಾವೇರಿ ಕೊಳ್ಳದ ರೈತರಿಗೆ ನೀರಿನ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಕಾವೇರಿ ಜಲಾನಯನ ಪ್ರದೇಶದ ರೈತರು ಈ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸಬೇಕಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.