ವಿಜಯಟೈಮ್ಸ್ ಕವರ್‌ಸ್ಟೋರಿ ತಂಡ ಸರ್ಕಾರಿ ಸುಪಾರಿಯ ಕರಾಳ ಕತೆಯನ್ನ ಬಯಲು ಮಾಡಲಿದೆ. ಸರ್ಕಾರವೇ ತನ್ನ ಪ್ರಜೆಗಳನ್ನ ಹಿಂಸಿಸಿ ಹಿಂಸಿಸಿ ಕೊಲ್ಲಲು ಮಾಡಿರೋ ಹುನ್ನಾರದ ಭೀಕರ ಸ್ಟೋರಿಯನ್ನ ಹೇಳಲಿದೆ ಬೇರೆಯವರ ಬದುಕು ಹಸನಾಗಿಸಲು ೧೩ ಗ್ರಾಮಗಳ ೬೦ ಸಾವಿರ ಮಂದಿಯನ್ನು ಜೀವಂತವಾಗಿ ಮುಳುಗಿಸುತ್ತಿರೋ ಕರುಣಾಜನಕ ಕತೆಯನ್ನು ಬಿಚ್ಚಿಡಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಭಾಗವಾದ ನಾರಾಯಣಪುರ ಹಿನ್ನೀರ ಯೋಜನೆಗೆ ೧೪ ವರ್ಷಗಳ ಹಿಂದೆಯೇ ೧೩ ಗ್ರಾಮಗಳನ್ನ ಮುಳುಗಿಸಲಾಗಿತ್ತು. ದಾಖಲೆಗಳಲ್ಲಿ ಮಾತ್ರ ಇವರೆಲ್ಲರಿಗೂ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ ಅಂತ ದೊಡ್ಡದಾಗಿ ಹೇಳ್ತಾರೆ. ಆದ್ರೆ ನಿಜ ಸಂಗತಿ ಏನು ಅಂತ ಸತ್ಯಶೋಧನೆಗೆ ಹೊರಟ ಕವರ್‌ಸ್ಟೋರಿ ತಂಡಕ್ಕೆ ಶಾಕ್ ಕಾದಿತ್ತು. ಬಿಸ್ನಾಳ, ಬಿಸ್ನಾಳ ಕೊಪ್ಪ, ಖಜಗಲ್, ಕಟಗೂರ, ತುರಡಗಿ ಸೇರಿದಂತೆ ೧೩ ಗ್ರಾಮಗಳ ಸಂತ್ರಸ್ತರಿಗೆ ಇಂದಿಗೂ ಶಾಶ್ವತ ಬಿಡಿ, ಸೂಕ್ತ ತಾತ್ಕಾಲಿಕ ಪರಿಹಾರವನ್ನೂ ನೀಡಿಲ್ಲ. ಬರೀ ತಗಡು ಶೆಡ್ ನಿರ್ಮಿಸಿಕೊಟ್ಟು ಬದುಕಿ ಅಂತ ಕಷ್ಟದ ಕೂಪಕ್ಕೆ ತಳ್ಳಿದ್ದಾರೆ. ಆ ಕಷ್ಟದ ಕೂಪದಲ್ಲಿ ಸಂತ್ರಸ್ತರು ಯಾವ ರೀತಿ ಒದ್ದಾಡಿ ಒದ್ದಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅನ್ನೋದನ್ನ ಕವರ್‌ಸ್ಟೋರಿ ತಂಡ ಸಚಿತ್ರವಾಗಿ ಸೆರೆಹಿಡಿದಿದೆ.
ತಗಡು ಶೆಡ್‌ನಲ್ಲಿ ಬೇಯುತ್ತಿವೆ ಜೀವಗಳು: ಯಾವುದೇ ಮೂಲಭೂತ ಸೌಕರ್ಯ ಕೊಡದೆ, ರಕ್ಷಣೆ ಇಲ್ಲದೆ ತಗಡು ಶೆಡ್‌ನಲ್ಲಿ ಜನರು ಕಳೆದ ೧೪ ವರ್ಷಗಳಿಂದ ಬದುಕುತ್ತಿದ್ದಾರೆ. ರಣ ಬಿಸಿಲಿನ ತಾಪಕ್ಕೆ ತಗಡಿನ ಬಿಸಿ ಜನರನ್ನು ಕಂಗಾಲಾಗಿಸಿದೆ. ಆದ್ರೆ ಅನಿವಾರ್ಯವಾಗಿ ಇಲ್ಲಿ ಬದುಕಬೇಕಾಗಿದೆ. ಪುಟ್ಟ ಪುಟ್ಟ ಮಕ್ಕಳು, ಮುದುಕರು ಬಿಸಿಲ ತಾಪ ತಾಳಲಾರದೆ ಒದ್ದಾಡುತ್ತಿದ್ದಾರೆ. ಅದೆಷ್ಟೋ ಜೀವಗಳು ಬಿಸಿಲಿನ ಝಳ ತಾಳಲಾಗದೆ ಪ್ರಾಣವನ್ನೇ ಕಳೆದುಕೊಂಡಿವೆ. ಮಳೆ ಬಂದ್ರೆ ತಗಡು ಶೆಡ್‌ನ ಬದುಕು ನರಕಮಯ. ಶೆಡ್ ಒಳಗೆ ನೀರು ತುಂಬಿ ಮನೆಯೊಳಗಿನ ಸಾಮಾನೆಲ್ಲಾ ಕೊಚ್ಚಿ ಹೋಗುತ್ತೆ. ಗಾಳಿ ಬಂದ್ರೆ ತಗಡು ಗಾಳಿಗೆ ಹಾರಿ ಹೋಗುತ್ತೆ, ತಗಡು ಶೀಟ್ ತುಕ್ಕು ಹಿಡಿದು ನೀರು ಸೋರಲಾರಂಭಿಸುತ್ತೆ. ಒಟ್ಟಾರೆ ವರ್ಷವಿಡೀ ಇವರ ಬದುಕು ದೇವರಿಗೇ ಪ್ರೀತಿ.
ಹಕ್ಕು ಪತ್ರ ಕೊಡದೆ ರಾಜಕೀಯ ಮಾಡ್ತಿದ್ದಾರೆ: ಈಗಾಗ್ಲೇ ನಾರಾಯಣಪುರ ಹಿನ್ನೀರಿನ ಯೋಜನೆಯಲ್ಲಿ ಮುಳುಗಡೆಯಾದವರ ಪುನರ್ವಸತಿಗೆ ಸರ್ಕಾರ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಆದ್ರೆ ಆ ಯಾವ ಪರಿಹಾರವೂ ಜನರಿಗೆ ತಲುಪಿಲ್ಲ. ಶಾಶ್ವತ ಪರಿಹಾರ ಯೋಜನೆಗಳು ಬಿಡಿ ತಾತ್ಕಾಲಿಕ ಪರಿಹಾರವನ್ನು ಸರಿಯಾಗಿ ಕಲ್ಪಿಸದೆ ರೈತರ ಬಾಳಲ್ಲಿ ಚೆಲ್ಲಾಟ ಆಡುತ್ತಿದೆ ಸರ್ಕಾರ. ಅದೆಷ್ಟೋ ಕುಟುಂಬಗಳು ಇನ್ನೂ ಸಮುದಾಯ ಭವನ, ಶಾಲೆಗಳಲ್ಲಿ ದಿನದೂಡುತ್ತಿವೆ. ಜನರಿಗೆ ಮನೆಕಟ್ಟಲು ನಿವೇಶನ ನೀಡಬೇಕಾಗಿತ್ತು. ಆದ್ರೆ ಕಾಟಾಚಾರಕ್ಕೆ ಲೇಔಟ್‌ಗಳನ್ನ ಮಾಡಿ, ಅದಕ್ಕೆ ಸರಿಯಾದ ಸಂಪರ್ಕ ಮಾರ್ಗಗಳನ್ನೂ ಮಾಡದೆ, ನಿವೇಶನಗಳ ಹಕ್ಕು ಪತ್ರವನ್ನೂ ಕೊಡದೆ ಆಟ ಆಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಕಾಟಚಾರಕ್ಕೆ ಹಕ್ಕುಪತ್ರಗಳ ಝೆರಾಕ್ಸ್ ಪ್ರತಿಯನ್ನು ವಿತರಿಸಿ ರೈತರಿಗೆ ಮೋಸ ಮಾಡಲಾಗುತ್ತಿದೆ. ರೈತರೆಷ್ಟೇ ಗೋಳಾಡಿದ್ರು ಅಧಿಕಾರಿಗಳು ಇವರಿಗೆ ಹಕ್ಕುಪತ್ರ ಕೊಡದೆ ಕ್ರೂರ ಆಟ ಆಡುತ್ತಿದ್ದಾರೆ. ಇನ್ನು ಕೆಲ ಲಜ್ಜೆಗೆಟ್ಟ ಅಧಿಕಾರಿಗಳು ಹಕ್ಕುಪತ್ರಕ್ಕಾಗಿ ಲಂಚವನ್ನೂ ಕೇಳುತ್ತಿದ್ದಾರೆ.
ಮುಳುಗಡೆ ಜಾಗದಲ್ಲೇ ಮತ್ತೆ ಪುನರ್ವಸತಿ: ಇದು ಕಾನೂನಿನ ಕುಹಕವೋ ಅಥವಾ ಅಧಿಕಾರಿಶಾಹಿಗಳ ಅಹಂಕಾರವೋ? ಜಲನೀತಿ ಆಯೋಗದ ನಿಯಮದ ಪ್ರಕಾರ, ಪುನರ್ವಸತಿ ಕೇಂದ್ರಗಳ ಮುಳುಗಡೆಯಾದ ಪ್ರದೇಶದಿಂದ ಮೂರು ಕಿ.ಲೋ ದೂರ ಹಾಗೂ ಆರು ಅಡಿ ಎತ್ತರದಲ್ಲಿರಬೇಕು. ಆದ್ರೆ ತಮಾಷೆ ನೋಡಿ ನಾರಾಯಣಪುರ ಜಲಾಶಯದಲ್ಲಿ ಮನೆ, ಮಠ, ಆಸ್ತಿ ಕಳೆದುಕೊಂಡವರಿಗೆ ಪುನರ್ವಸತಿಯಲ್ಲಿ ಕೇವಲ ೮೦೦ ಮೀಟರ್‌ನಿಂದ ೧ ಕಿ.ಮೀ ದೂರದ ಅಂತರದಲ್ಲೇ ಮಾಡಲಾಗಿದೆ. ಆ ಮೂಲಕ ಇವರನ್ನು ಮತ್ತೆ ಮುಳುಗಡೆಯ ಭೀತಿಗೆ ದೂಡಲಾಗುತ್ತಿದೆ. ಜೊತೆಗೆ ಅಧಿಕಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ಲೂಟಿಗೆ ಹೊಡೆಯಲು ರೆಡಿಯಾಗಿದ್ದಾರೆ.
ಭವಿಷ್ಯವನ್ನೇ ಕಳೆದುಕೊಂಡ ಮಕ್ಕಳು: ನಾರಾಯಣಪುರ ಹೀನ್ನಿರು ನೀರಾವರಿ ಯೋಜನೆಗಳಿಗೆ ಕೃಷ್ಣಾ ಜಲ ಭಾಗ್ಯ ನಿಗಮ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಕೊಡಲಿ ಏಟು ಕೊಟ್ಟಿದೆ. ತಾತ್ಕಾಲಿಕ ಪುನರ್ವಸತಿ ಕೇಂದ್ರಗಳ ಶಾಲೆಗಳಲ್ಲಿ ಜನರೇ ವಾಸವಗಿದ್ದಾರೆ. ಇನ್ನು ಶಾಲೆಗಳು ಗುಡಿಗಳಲ್ಲೋ, ಮರದ ಕೆಳಗೆ ನಡೆಯುತ್ತಿವೆ. ಇನ್ನು ಬಿಸ್ನಾಳು ಕೊಪ್ಪದ ಪುನರ್ವಸತಿ ಕೇಂದ್ರದಲ್ಲಿರೋ ಶಾಲೆ ಕುರಿ ದೊಡ್ಡಿಗಿಂತಲೂ ಕಡೆಯಾಗಿದೆ. ಶಾಲೆ ಅಂಗಳ ಕೊಚ್ಚೆ ಕೊಂಪೆ. ಶಿಕ್ಷಕರು ಹುಣ್ಣಿಮೆಗೊಮ್ಮೆ ಅಮಾವಸ್ಯೆಗೊಮ್ಮೆ ಬಂದು ಮುಖ ತೋರಿಸಿ ಹೋಗ್ತಾರೆ. ಹಾಗಾಗಿ ಈ ಮಕ್ಕಳು ಕೂಲಿ ಕಾರ್ಮಿಕರಾಗಿ ಮಾರ್ಪಾಡಾಗುತ್ತಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಏನಂತಾರೆ?: ಸಂತ್ರಸ್ತರ ನರಕಯಾತನೆಯ ನೋವನ್ನು ಯಾಕೆ ನೀವು ನಿರ್ಲಕ್ಷಿಸಿದ್ದೀರಿ. ಜನಪ್ರತಿನಿಧಿಗಳಾಗಿ ನೀವು ಬಡವರ ಬದುಕಿನಲ್ಲೂ ರಾಜಕೀಯದಾಟ ಆಡ್ತಿದ್ದೀರಾ ಅಂತ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲರ ಬಳಿ ಕೇಳಿದಾಗ, ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೆ ಕಾಂಗ್ರೆಸ್ ನಾಯಕರ ರಾಜಕೀಯ ಮೇಲಾಟದಿಂದ ಪುನರ್ವಸತಿ ಕಾರ್ಯಗಳು ವಿಳಂಬವಾಗುತ್ತಿವೆ. ಆದಷ್ಟು ಬೇಗ ಇವರ ಸಮಸ್ಯೆಯನ್ನು ಪರಿಹರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಇನ್ನು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕಾಂಗ್ರೆಸ್ ಆಡಳಿತ ಸಂದರ್ಭದಲ್ಲೇ ಸಂತ್ರಸ್ತರ ಪುನರ್ವಸತಿಗೆ ಅನುದಾನ ಹಾಗೂ ಭೂಮಿ ಗುರುತಿಸಲಾಗಿತ್ತು. ಆದ್ರೆ ಈಗಿನ ಸರ್ಕಾರದ ನಿರ್ಲಕ್ಷö್ಯದಿಂದ ಪುನರ್ವಸತಿ ಕೆಲಸಗಳು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಅದೇ ರೀತಿ ನಾವು ಕೃಷ್ಣಾ ಜಲ ಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ಚಿಣಿ ಅವರೂ ಕೂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿರೋದನ್ನ ಒಪ್ಪಿಕೊಳ್ತಾರೆ.