ದುಬೈ, ಅ. 16: 13ನೇ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೋಲ್ಕತ್ತಾ ನೈಟ್ರೈಡರ್ಸ್, ಟೂರ್ನಿಯ ಪ್ಲೇ-ಆಫ್ ಹಂತಕ್ಕೇರುವ ನಿರೀಕ್ಷೆಯಲ್ಲಿರುವ ಬೆನ್ನಲ್ಲೇ, ಕೆಕೆಆರ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ.
ಈಗಾಗಲೇ ಟೂರ್ನಿಯಲ್ಲಿ ಸಮಬಲದ ಪ್ರದರ್ಶನ ನೀಡಿರುವ ಕೆಕೆಆರ್ ತಂಡದ ನಾಯಕತ್ವವಹಿಸಿದ್ದ, ದಿನೇಶ್ ಕಾರ್ತಿಕ್ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಹೀಗಾಗಿ ತಂಡದ ನಾಯಕತ್ವದ ಜವಾಬ್ಧಾರಿ ಇದೀಗ ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್ ಹೆಗಲಿಗೇರಿದೆ. ಈ ಬಗ್ಗೆ ಕೆಕೆಆರ್ ಫ್ರಾಂಚೈಸಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಈವರೆಗೆ ಮುನ್ನಡೆಸಿದ್ದ ದಿನೇಶ್ ಕಾರ್ತಿಕ್, ಸ್ವತಃ ತಾವೇ ನಾಯಕತ್ವವನ್ನು ಇಯಾನ್ ಮಾರ್ಗನ್ಗೆ ನೀಡಲು ಬಯಸಿದ್ದಾರೆ ಎಂದು ಕೆಕೆಆರ್ ತಿಳಿಸಿದೆ. ತಂಡದ ಹಿತದೃಷ್ಠಿಯಿಂದ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಮಾರ್ಗನ್ ತಂಡವನ್ನು ಮುನ್ನಡೆಸಲಿ ಎಂದು ಸ್ವತಃ ದಿನೇಶ್ ಕಾರ್ತಿಕ್ ಮ್ಯಾನೇಜ್ಮೆಂಟ್ಗೆ ತಿಳಿಸಿದ್ದಾರೆ ಕೆಕೆಆರ್ ತನ್ನ ವೆಬ್ಸೈಟ್ನಲ್ಲಿ ಬರೆದುಕೊಂಡಿದೆ.
ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ಹೇಳಿಕೆಯನ್ನು ಕೊಲ್ಕತಾ ನೈಟ್ ರೈಡರ್ಸ್ ವೆಬ್ಸೈಟ್ ಉಲ್ಲೇಖಿಸಿದೆ. ತಂಡವೇ ಮೊದಲು ಎಂಬ ಭಾವನೆ ಹೊಂದಿರುವ ದಿನೇಶ್ ಕಾರ್ತಿಕ್ ಅವರಂತಾ ನಾಯಕನನ್ನು ಪಡೆಯಲು ನಾವು ಅದೃಷ್ಠ ಮಾಡಿದ್ದೇವೆ. ಇಂತಹ ನಿರ್ಧಾರವನ್ನು ಯಾರೇ ಕೈಗೊಂಡಿದ್ದರೂ, ಅದಕ್ಕೆ ಸಾಕಷ್ಟು ಧೈರ್ಯ ಬೇಕು” ಎಂದು ವೆಂಕಿ ಮೈಸೂರ್ ತಿಳಿಸಿದ್ದಾರೆ.
ದಿನೇಶ್ ಕಾರ್ತಿಕ್ ಅವರ ನಿರ್ಧಾರ ಆಶ್ಚರ್ಯ ಮೂಡಿಸಿದ್ದರೂ, ಅದರ ಜೊತೆಗೆ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. 2019ರ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ತಂಡದಲ್ಲಿ ಹೊಂದಿರುವುದಕ್ಕೆ ನಾವು ಅದೃಷ್ಠಹೊಂದಿದ್ದೇವೆ. ಉಪನಾಯಕನಾಗಿದ್ದ ಅವರು ಮುಂದಿನ ಹಂತದಲ್ಲಿ ತಂಡವನ್ನು ಸಂಪೂರ್ಣವಾಗಿ ಮುನ್ನಡೆಸಲಿದ್ದಾರೆ” ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರ್ ಹೇಳಿಕೆಯನ್ನು ನೀಡಿರುವುದನ್ನು ಕೆಕೆಆರ್ ವೆಬ್ಸೈಟ್ ಉಲ್ಲೇಖ ಮಾಡಿದೆ.