ಬೆಂಗಳೂರು, ನ. 17: ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಬಂಧನವಾಗಿದೆ. ತಲೆ ಮರೆಸಿಕೊಂಡು ಓಡಾಡುತ್ತಿದ್ದ ಸಂಪತ್ ರಾಜ್ಅನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈಗ ಸಿಸಿಬಿ ವಶದಲ್ಲಿರುವ ಸಂಪತ್ ರಾಜ್ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ರಾಜ್ ಓಡಾಡಿದ ಪರಿ ಮಾತ್ರ ರಣ ರೋಚಕ.
ಈ ಸಂಪತ್ ರಾಜ್ ಕೆಜಿಹಳ್ಳಿ ಡಿಜೆಹಳ್ಳಿ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ದ್ವಂಸ ಕೇಸ್ ನಲ್ಲಿ ಪ್ರಮುಖ ಅರೋಪಿಯಾಗಿದ್ದು, ಬೆಂಗಳೂರಿನ ಮಾಜಿ ಮೇಯರ್. ಈಗ ಸಿಸಿಬಿ ವಶದಲ್ಲಿದ್ದಾನೆ. ಆದರೆ ಕಳೆದೊಂದು ತಿಂಗಳಿನಿಂದ ಸಂಪತ್ ರಾಜ್ ಆಟಾಟೋಪ ಅಧಿಕಾರಿಗಳ ತಲೆಓವಾಗಿ ಪರಿಣಮಿಸಿದ್ದ.
ನಾಲ್ಕೈದು ಬಾರಿ ಕೊರೋನಾ ನೆಪವೊಡ್ಡಿ ಹೈ ಡ್ರಾಮಾ ಆಡಿದ್ದ ಸಂಪತ್ ರಾಜ್, ಕೊನೆಗೆ ಹೈ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ಎಸ್ ಓಖಾ ವಿಭಾಗೀಯ ಪೀಠ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಅಲ್ಲದೆ ಈ ಪ್ರಕರಣ ಸಂಬಂಧ ಸಿಸಿಬಿ ತನಿಖಾಧಿಕಾರಿಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ತಮ್ಮ ತನಿಖೆಯ ವೇಗ ಹೆಚ್ಚಿಸಿದ ಸಿಸಿಬಿ ಅಧಿಕಾರಿಗಳು ಕೊನೆಗೂ ಈಗ ಸಂಪತ್ ರಾಜ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಸಿಸಿಬಿ ಅಧಿಕಾರಿಗಳು 50 ಪುಟಗಳ ಮಧ್ಯಂತರ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.
ಸಿಸಿಬಿ ಮೂಲಗಳ ಪ್ರಕಾರ, ಈತ ತಲೆ ಮರೆಸಿಕೊಂಡು ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಹಲವು ಭಾಗದಲ್ಲಿ ವಾಸವಾಗಿದ್ದ. ಒಂದು ಕಡೆ ಎರಡು ದಿನಕ್ಕಿಂತ ಹೆಚ್ಚು ಎಲ್ಲಿಯೂ ವಾಸವಾಗಿರಲಿಲ್ಲ. ಇದರರಿವು ಸಿಸಿಬಿ ಅಧಿಕಾರಿಗಳಿಗೆ ಇದ್ದಿದ್ರು ಬಂಧಿಸೋಕೆ ಸಾಧ್ಯವಾಗಿರಲಿಲ್ಲ. ನಿನ್ನೆ ಬೆಂಗಳೂರಿನ ಬೆನ್ಸನ್ ಟೌನ್ ಬಳಿಯ ತನ್ನ ಸ್ನೇಹಿತನ ನಿವಾಸಕ್ಕೆ ಬಂದಿದ್ದ ವೇಳೆ ಸಿಸಿಬಿ ಅಧಿಕಾರಿಗಳು ಎಚ್ಚೆತ್ತುಕೊಂಡು ಬಂಧಿಸಿದ್ದಾರೆ. ಸದ್ಯ ಸಿಸಿಬಿ ವಶದಲ್ಲಿರುವ ಸಂಪತ್ ರಾಜ್ ನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.