ಮಡಿಕೇರಿ, ಸೆಪ್ಟೆಂಬರ್ 5: ಇಂದು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬುಧವಾರದಿಂದಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾನುವಾರ ಸಂಜೆಯಿಂದಲೂ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಅಧಿಕ ಮಳೆಯಾಗುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಶಾಲಾ ಕಾಲೇಜುಗಳಿಗೆ ಇಂದು ರಜೆಯನ್ನು ಘೋಷಿಸಿದ್ದಾರೆ.
ಜೊತೆಗೆ ಮಡಿಕೇರಿ ಹಾಗೂ ಕುಶಾಲನಗರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುವ ಸಂಭವವೂ ಇದೆ. ಕಳೆದ ತಿಂಗಳು ದಕ್ಷಿಣ ಕೊಡಗಿನಲ್ಲಿ ಮಳೆಯಿಂದ ಹಲವೆಡೆ ಭೂಕುಸಿತವಾಗಿತ್ತು. ಈಗ ಅಲ್ಲೂ ಮಳೆ ಮುಂದುವರೆದಿದೆ. ಲಕ್ಷ್ಮಣ ತೀರ್ಥ, ಕೊಂಗನಪೋಲ್ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ.