ಬೆಂಗಳೂರು, ಆಗಸ್ಟ್ 27: ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ ಸತ್ತರೂ ಬಿಜೆಪಿ ಎಂಬುದಾಗಿ ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ. 1988ರಲ್ಲಿ ಒಂದು ಬೂತ್ ಕಮಿಟಿ ಅಧ್ಯಕ್ಷನಾಗಿದ್ದ ನನಗೆ ಭಾರತೀಯ ಜನತಾ ಪಕ್ಷ ಅದೆಷ್ಟು ಹುದ್ದೆ ನೀಡಿದೆ.ನನ್ನ ಕುಟುಂಬದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಯಾರು ಇರಲಿಲ್ಲ. ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದೆ ಬಿಜೆಪಿ.ನಾನು ಯಾರ ಮುಂದೆಯೂ ಮಂತ್ರಿಸ್ಥಾನವನ್ನೇ ಕೇಳಿರಲಿಲ್ಲ. ಇನ್ನು ಖಾತೆಯ ಬಗ್ಗೆ ಯಾಕೆ ಕೇಳಲಿ ? ಎಂಬುದಾಗಿ ಸಚಿವ ಸಿಟಿ ರವಿ ಹೇಳಿದ್ದಾರೆ.
ನಾನು ಅಸಾಮಾಧಾನಿತನು ಅಲ್ಲ ಬಂಡಾಯಗಾರನೂ ಅಲ್ಲ. ನನ್ನ ನಿಷ್ಠೆ ಕೇವಲ ಬಿಜೆಪಿಗೆ. ಆದರೆ ನಾನು ಸಿದ್ದಾಂತ ನಿಷ್ಠ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನನ್ನೊಳಗಿನ ಹೋರಾಟಗಾರ ಎದ್ದು ನಿಲ್ಲುತ್ತಾನೆ. ನಾನೇನು ಮಾಡಲಿ, ನಾನು ಜನರ ನಡುವಿನಿಂದ ಬೆಳೆದು ಬಂದ ಹೋರಾಟಗಾರ. ಕೆಲವು ನ್ಯೂಸ್ ಚಾನೆಲ್ ಗಳು ನನ್ನ ಪಕ್ಷನಿಷ್ಠೆ ಬಗ್ಗೆಯೇ ಸಂಶಯ ಪಡುತ್ತಿವೆ. ಅದಕ್ಕೆ ನಾನು ಹೊಣೆಗಾರನಲ್ಲ. ಅಧಿಕಾರಕ್ಕಾಗಿ ಮಂಡಿಯೂರುವವನೂ ಅಲ್ಲಾ, ಜನಪ್ರೀತಿಗಳಿಸಲು ಅಧಿಕಾರವೇ ಬೇಕೆಂದು ಇಲ್ಲ ಎಂದು ಸಚಿವ ಸಿಟಿ ರವಿ ಮಾಧ್ಯಮಗಳ ಮುಂದೆ ಖಡಕ್ ಮಾತುಗಳನ್ನಾಡಿದ್ದಾರೆ.