ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೊರೊನಾ ಸಂಕಷ್ಟ ಮತ್ತೊಂದು ಕರಾಳತೆ ಬಯಲಾಗಿದೆ. ತನ್ನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಕೊಡಿಸಲು ತಾಯಿ ತನ್ನ ತಾಳಿಯನ್ನೇ ಅಡವಿಟ್ಟು ಟಿವಿ ಖರೀದಿಸಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲ್ಲೂಕಿನಲ್ಲಿ ನಡೆದಿದೆ.
ಕೊರೊನಾ ತಂದೊಡ್ಡಿರುವ ಆತಂಕ ಶಿಕ್ಷಣದ ಮೇಲೆ ಪ್ರಭಾವ ಬೀರಿದ್ದು, ಕೊರೊನಾದಿಂದ ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಈ ಆನ್‍ಲೈನ್ ಶಿಕ್ಷಣದಿಂದ ಬಡ ಕುಟುಂಬಗಳು ವಂಚಿತರಾಗುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದ ಮಹಿಳೆ ಕಸ್ತೂರಿ ಎಂಬಾಕೆ ತನ್ನ ಮಕ್ಕಳ ಶಿಕ್ಷಣಕ್ಕಾಗಿ 20 ಸಾವಿರ ರೂ.ಗೆ ತನ್ನ ಚಿನ್ನದ ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದಾರೆ.
ಕಸ್ತೂರಿಯ ಇಬ್ಬರು ಮಕ್ಕಳ ಪೈಕಿ ಒಬ್ಬ 7ನೇ ತರಗತಿ ಹಾಗೂ ಮತ್ತೊಬ್ಬ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನ ಕೇಳಲು ಪ್ರತಿದಿನ ಟಿವಿ ನೋಡುವಂತೆ ಶಿಕ್ಷಕರು ಹೇಳಿದ್ದರು. ಆದರೆ ಅವರ ಮನೆಯಲ್ಲಿ ಟಿವಿ ಇರಲಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ತಾಯಿ ಕಸ್ತೂರಿ ತನ್ನ ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಎಚ್‍ಡಿಕೆ ಬೇಸರ:
ಮಹಿಳೆ ತನ್ನ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಕೊಡಿಸಲು ತಾಳಿ ಅಡವಿಟ್ಟು ಟಿವಿ ಖರೀದಿಸಿರುವ ಘಟನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ಕೊರೋನಾ ಸೋಂಕು ಜನರ ಜೀವ-ಜೀವನದ ಜೊತೆ ಮಾತ್ರ ಚೆಲ್ಲಾಟ ಮಾಡುತ್ತಿಲ್ಲ. ಇಡೀ ಮನುಕುಲದ ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ” ಎಂದು ಬರೆದಿದ್ದಾರೆ.