ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚೇತರಿಕೆಗಾಗಿ ಕೋಟ್ಯಾಂತರ ಅಭಿಮಾನಿಗಳು ಮಾಡಿದ ಪ್ರಾರ್ಥನೆ ಫಲನೀಡಿದ್ದು, ಕೊರೊನಾ ಸೋಂಕಿನಿಂದ ಕಳೆದ ಹಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್‍ಪಿಬಿ, ಕೊರೊನಾದಿಂದ ಪಾರಾಗಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆ.5ರಂದು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿಬಿ ಆರೋಗ್ಯ ಪರಿಸ್ಥಿತಿ ಕೆಲವು ದಿನಗಳಿಂದ ತೀರಾ ಹದಗೆಟ್ಟಿತ್ತು. ಅಲ್ಲದೇ ವೆಂಟಿಲೇಟರ್ ಅಳವಡಿಸುವ ಮೂಲಕ ಎಸ್‍ಪಿಬಿ ಅವರ ಆರೋಗ್ಯ ಚೇತರಿಕೆಗೆ ವೈದ್ಯರು ಸಹ ಸಾಕಷ್ಟು ಪ್ರಯತ್ನ ನಡೆಸಿದ್ದರು. ಜೊತೆಗೆ ವಿಶ್ವದ ನಾನಾ ಕಡೆಗಳಲ್ಲಿರುವ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಕೋಟ್ಯಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕನ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಇವೆಲ್ಲದರ ಫಲವಾಗಿ ಇದೀಗ ಎಸ್‌ಪಿಬಿ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಎಸ್ಪಿಬಿ ಪುತ್ರ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ತಂದೆ ಆರೋಗ್ಯ ಸ್ಥಿರವಾಗಿದ್ದು, ನನ್ನ ತಂದೆ ಪರವಾಗಿ ನೀವು ನೀಡಿದ ನಿರಂತರ ಬೆಂಬಲ, ಪ್ರಾರ್ಥನೆಗೆ ಧನ್ಯವಾದಗಳು. ನನ್ನ ತಂದೆ ಆರೋಗ್ಯ ಈಗ ಸ್ಥಿರವಾಗಿದೆ. ಕೊರೊನಾ ವರದಿ ಸಹ ನೆಗೆಟಿವ್ ಬಂದಿದೆ. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡುತ್ತಿರುತ್ತೇವೆ ಎಂದು ಎಸ್ಪಿಬಿ ಪುತ್ರ ಚರಣ್ ತಿಳಿಸಿದ್ದಾರೆ.