ತಿರುಪತಿಯ ತಿಮ್ಮಪ್ಪನ ಸನ್ನಿಧಾನದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ವಾರಗಳವರೆಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ಬಂದ್ ಮಾಡಲು ಟಿಟಿಡಿ ಚಿಂತನೆ ನಡೆಸಿದೆ.
ತಿರುಪತಿ ದೇವಸ್ಥಾನದ 14 ಅರ್ಚಕರು ಹಾಗೂ ದೇವಸ್ಥಾನದಲ್ಲಿ ಕೆಲಸ ಮಾಡುವ 140 ಸಿಬ್ಬಂದಿಗೆ ಕೊರೊನಾ ಸೋಂಕು ತಗಲಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿಯ ಹಿತದೃಷ್ಟಿಯಿಂದ ಕೆಲವು ದಿನಗಳವರೆಗೆ ದೇವಸ್ಥಾನವನ್ನು ಮುಚ್ಚುವಂತೆ ಟಿಟಿಡಿಗೆ ಒತ್ತಡ ಬರುತ್ತಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಭಕ್ತರಿಗೆ ದೇವರ ದರ್ಶನ ಸ್ಥಗಿತಗೊಳಿಸುವಂತೆ ಅಥವಾ ಹೆಚ್ಚು ಸೋಂಕಿತರು ಇರುವ ರಾಜ್ಯದಿಂದ ಬರುವ ಭಕ್ತರಿಗೆ ದೇವಸ್ಥಾನದ ಪ್ರವೇಶವನ್ನು ನಿಷೇಧಿಸುವಂತೆ ತಿರುಮಲದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಟಿಟಿಡಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ದೇವಸ್ಥಾನದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜೂ.11ರಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಬಾಗಿಲು ತೆರೆಯಲಾಗಿತ್ತು. ಅಲ್ಲದೇ ಪ್ರತಿನಿತ್ಯ 12 ಸಾವಿರ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ದೊರೆಯುತ್ತಿತ್ತು.