ಕೆವಾಡಿಯಾ, ಅ.31: ಕೊರೊನಾ ಸೋಂಕಿನ ವಿರುದ್ಧ ಭಾರತ ದಿಟ್ಟ ಹೋರಾಟ ನಡೆಸುತಿದೆ. ಕೊರೋನಾವನ್ನು ನಾವು ಮಣಿಸುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿನ ಜೀವ ನದಿ ನರ್ಮದಾ ತಟದಲ್ಲಿ ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ್ಬಾಯಿ ಪಟೇಲ್ ಅವರ ಪುತ್ಥಳಿ (ಏಕತಾ ಪ್ರತಿಮೆ)ಗೆ ಇಂದು ರಾಷ್ಟ್ರೀಯ ಏಕತಾ ದಿನಾಚರಣಾ (ಪಟೇಲರ 145ನೇ ಜನ್ಮದಿನ) ಅಂಗವಾಗಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವಿಶ್ವದ ಅನೇಕ ದೇಶಗಳು ಕೋವಿಡ್ -19 ಪಿಡುಗಿಗೆ ಹೆದರಿ ಸಂಕಷ್ಟಕ್ಕೆ ಸಿಲುಕಿವೆ. ಆದರೆ ನಾವು ಈ ಪಿಡುಗಿನ ವಿರುದ್ಧ ಧೈರ್ಯದಿಂದ ಹೋರಾಡುತ್ತೇವೆ. ಈ ಹೆಮ್ಮಾರಿಯನ್ನು ಶೀಘ್ರದಲ್ಲೇ ಮಣಿಸುತ್ತೇವೆ, ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ವರ್ಷ ನಮಗೆ ಈ ಮಹಾಮಾರಿ ವಿಶ್ವದ ಮೇಲೆ ದಾಳಿ ಮಾಡಿ ಭಾರೀ ಸಂಕಷ್ಟ ತಂದೊಡ್ಡಲಿದೆ ಎಂಬುದು ತಿಳಿದಿರಲಿಲ್ಲ.
ಈ ವೈರಸ್ ಹಾವಳಿಗೆ ಸಿಲುಕಿರುವ ಅನೇಕ ರಾಷ್ಟ್ರಗಳು ಹೆದರಿಕೆಯಿಂದ ಹೋರಾಡುತ್ತಿವೆ. ಆದರೆ ನಾವು ಸಂಘಟಿತ ಮತ್ತು ಇಚ್ಚಾಶಕ್ತಿಯ ಹೋರಾಟವನ್ನು ನಡೆಸುತ್ತಿದ್ದೇವೆ. ನಾವು ಪೀಡೆಗೆ ಹೆದರಿಲ್ಲ. ಈ ಪಿಡುಗಿನ ವಿರುದ್ಧ ನಾವು ಖಂಡಿತ ಜಯ ಸಾಧಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.