ಮೈಸೂರು, ಅ. 28: ಮೈಸೂರಿನ ನಿವೇದಿತ ನಗರದಲ್ಲಿ ನಿವೃತ್ತ ಪ್ರಾಂಶುಪಾಲರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕಿಯೊಬ್ಬರ ತಂದೆ ವಿಶ್ವನಾಥ್ ಭಟ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಪಿ, ಪ್ರಾಂಶುಪಾಲ ಪರಶಿವಮೂರ್ತಿ ಕಳೆದ ಸೆಪ್ಟೆಂಬರ್ 20 ರಂದು ತಮ್ಮ ಮನೆಯಲ್ಲೆ ಕೊಲೆಯಾಗಿದ್ದರು. ಮೃತರ ಪತ್ನಿ ಸವಿತ ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆಯ ವೇಳೆ ಕೊಲೆ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ” ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದರು.
ಐ.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ರಿಕವರಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭುಗತಹಳ್ಳಿ ಗ್ರಾಮದ ನಿವಾಸಿ ನಾಗೇಶ ಎಂ.ಬಿನ್ ಮಹಾದೇವ (37), ಗಾರೆ ಕೆಲಸ ಮಾಡುವ ಭುಗತಹಳ್ಳಿ ಗ್ರಾಮದ ನಿವಾಸಿ ನಿರಂಜನ್ ಎನ್(22), ಮಡಿವಾಳಸ್ವಾಮಿ ಸಂಸ್ಕೃತ ಪಾಠಶಾಲೆಯ ಶಿಕ್ಷಕ ಸಿದ್ದರಾಜು ಬಿನ್ ಮಹದೇವಪ್ಪ(54) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕ ಕೆ.ಆರ್.ಮೊಹಲ್ಲಾ ನಿವಾಸಿ ವಿಶ್ವನಾಥ್ ಕೆ. ಬಿನ್ ಲೇಟ್ ಕೃಷ್ಣ ಭಟ್(52) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಸಹ ಶಿಕ್ಷಕ, ಪರಶಿವ ಬಿನ್ ಪುಟ್ಟಸ್ವಾಮಿ(55) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತರಿಂದ 55,000 ರೂ. ನಗದು ಹಣ, ನಾಲ್ಕು ದ್ವಿಚಕ್ರ ವಾಹನಗಳು, ಒಂದು ಟಾಟಾ ಏಸ್ ಗೂಡ್ಸ್ ವಾಹನ, ಎಂಟು ಮೊಬೈಲ್, ಎರಡು ಚಾಕು, ರಕ್ತಸಿಕ್ತ ಬಟ್ಟೆಗಳು ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು. ಮೃತ ಪರಶಿವಮೂರ್ತಿ ನಡೆಸುತ್ತಿದ್ದ ಸಂಸ್ಕೃತ ಪಾಠಶಾಲೆಯಲ್ಲಿನ ಶಿಕ್ಷಕರು ಪ್ರತಿ ತಿಂಗಳು ಅವರ ವೇತನದಲ್ಲಿ ನಿರ್ದಿಷ್ಟಪಡಿಸಿದ ಹಣ ನೀಡುವಂತೆ ನೀಡುತ್ತಿದ್ದ ಕಿರುಕುಳ, ಹಿಂಸೆ, ಹಾಗೂ ಅವಾಚ್ಯ ಶಬ್ಧಗಳಿಂದ ಬೈದಾಡುತ್ತ ತುಚ್ಛವಾಗಿ ಕಾಣುತ್ತಿರುವುದೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಗಳು ಬಾಯ್ಬಿಟ್ಟಿರುವುದಾಗಿ ತಿಳಿಸಿದರು.