ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರದೊಂದಿಗೆ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19ಗೆ ಸಂಬಂಧಿಸಿದ ಚಟುವಟಿಕೆಗಳ ಕುರಿತಂತೆ ಪರಿಶೀಲಿಸಲು ಗುರುವಾರ ನಡೆದ ವೀಡಿಯೋ ಕಾನ್ಫರೆನ್ಸ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕೊರೊನಾ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಲು ನಿರಾಕರಿಸುವುದು, ಹೆಚ್ಚು ಶುಲ್ಕ ವಿಧಿಸುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕೆಪಿಎಂಇ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಕ್ರಮಕೈಗೊಳ್ಳಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯಾ ವಲಯದ ಜಂಟಿ ಆಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಇದನ್ನು ಬಳಸಿಕೊಂಡು ಅಧಿಕಾರಿಗಳು ಕ್ರಮ ಜರುಗಿಸಬೇಕು. ಕ್ರಮಕೈಗೊಳ್ಳಲು ಪೊಲೀಸರ ಸಹಕಾರ ಪಡೆಯಬಹುದು ಎಂದ ಅವರು, ಈ ಕುರಿತು ಮುಖ್ಯಮಂತ್ರಿಗಳ ಬಳಿಯೂ ಚರ್ಚಿಸುವುದಾಗಿ ತಿಳಿಸಿದರು.
ಕೊರೊನಾ ಪತ್ತೆ ಪರೀಕ್ಷೆಗೆ ಸಿಬ್ಬಂದಿ ಕೊರತೆ ಎದುರಾಗಿದ್ದು, ಇದರಿಂದ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕಾಗಿ ಮೆಡಿಕಲ್ ಕಾಲೇಜುಗಳ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ಇಂಟರ್ನಲ್ ಅಂಕಗಳನ್ನು ನೀಡಬೇಕು. ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಕೊರೊನಾ ಕಾರ್ಯದಲ್ಲಿ ಭಾಗಿಯಾಗುವಂತೆ ಸೂಚಿಸಬೇಕು ಎಂದರು.
ಮುಂದಿನ 2-3 ದಿನಗಳಲ್ಲಿ ಬಿಬಿಎಂಪಿಯ ಪ್ರತಿ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಕೋವಿಡ್ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಬಿಬಿಎಂಪಿ ವಲಯ ಮಟ್ಟದಲ್ಲಿ ನಿಗದಿಪಡಿಸಿದಂತೆ ಕೊರೊನಾ ಪರೀಕ್ಷೆ ನಡೆಯುತ್ತಿಲ್ಲ. ವಲಯದ ಜಂಟಿ ಆಯುಕ್ತರು ತಮಗೆ ನೀಡಿದ ಗುರಿಯನ್ನು ತಲುಪಬೇಕು. ಪ್ರತಿ ದಿನ ನಡೆಸಿದ ಪರೀಕ್ಷೆಯ ಸಂಖ್ಯೆಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು.
ಲಕ್ಷಣ ರಹಿತ ರೋಗಿಗಳನ್ನು (ಎ ಸಿಂಪ್ಟಮೆಟಿಕ್) ಆಸ್ಪತ್ರೆಗೆ ಸೇರಿಸಬಾರದು. ಅಂತಹವರಿಗೆ ಮನೆ ಆರೈಕೆಗೆ ವ್ಯವಸ್ಥೆ ಮಾಡಬೇಕು. ವೃದ್ಧರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ರಿವರ್ಸ್ ಕ್ವಾರಂಟೈನ್ ಗೆ ಒಳಪಡಿಸಬೇಕು.