ಪಂಚತಂತ್ರ ಸಿನಿಮಾ ಖ್ಯಾತಿಯ ಸೊನಾಲ್ ಮೊಂತೆರೊ ಗನ್ ಹಿಡಿದಿದ್ದಾರೆ. ಅಂದ ಹಾಗೆ ಅವರು ಗನ್ ಹಿಡಿದಿರುವುದಕ್ಕೂ ಚಿತ್ರರಂಗದಲ್ಲಿನ ಸದ್ಯದ ಸಮಸ್ಯೆಗಳಿಗೂ ಯಾವುದೇ ಸಂಬಂಧವಿಲ್ಲ.
ಇದು ಅವರ ನಟನೆಯ ಹೊಸ ಕನ್ನಡ ಚಿತ್ರ ‘ಶಂಭೋ ಶಿವ ಶಂಕರ’ ಸಿನಿಮಾದ ಗೆಟಪ್! ಚಿತ್ರದ ಮುಹೂರ್ತ ಸಮಾರಂಭವು ಇಂದು ಬೆಳಿಗೆ ಬನಶಂಕರಿಯ ಭದ್ರಗಿರಿ ಮಂಜುನಾಥ ದೇವಾಲಯದಲ್ಲಿ ನೆರವೇರಿತು.
“ಚಿತ್ರದಲ್ಲಿ ನನ್ನ ಪಾತ್ರಕ್ಕೆ ತುಂಬ ಪ್ರಾಧಾನ್ಯತೆ ಇದೆ. ನನ್ನ ಪಾತ್ರದ ಸುತ್ತವೇ ಚಿತ್ರದ ಕತೆ ಸಾಗುತ್ತದೆ” ಎಂದು ಸೊನಾಲ್ ಸಂತೃಪ್ತಿ ವ್ಯಕ್ತಪಡಿಸಿದರು. ‘
ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುವ ಶಂಕರ್ ಕೋನಮಾನಹಳ್ಳಿಯವರೇ ನಿರ್ದೇಶನ ಮಾಡಿದ್ದಾರೆ. ತಾವು ಈ ಹಿಂದೆ ನಾಲ್ಕು ಧಾರಾವಾಹಿಗಳನ್ನು ನಿರ್ದೇಶಿಸಿದ್ದು ಸಿನಿಮಾ ನಿರ್ದೇಶನ ಇದೇ ಪ್ರಥಮ ಎಂದರು. ಚಿತ್ರದಲ್ಲಿ ಮೂವರು ನಾಯಕರಿದ್ದಾರೆ.
ಅವರ ಹೆಸರೇ ಶಂಬು, ಶಿವ ಮತ್ತು ಶಂಕರ. ಈ ಮೂವರು ನಾಯಕರಿಗೆ ಸೊನಾಲ್ ನಾಯಕಿ. ಶಂಭುವಾಗಿ ಅಭಯ್, ಶಿವನಾಗಿ ರಕ್ಷಕ್ ಮತ್ತು ಶಂಕರನಾಗಿ ರೋಗಿತ್ ನಟಿಸುತ್ತಿದ್ದಾರೆ.
ಸಂಗೀತ ನಿರ್ದೇಶಕ ಹಿತನ್ ಹಾಸನ್ ಮಾತನಾಡಿ, “ಇದು ನನ್ನ ಆರನೇ ಚಿತ್ರ. ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಹೆಚ್ಚು ಸಮಯ ಇದಕ್ಕೆ ಸಂಗೀತ ನೀಡಲು ದೊರಕಿದೆ. ಮೂರು ಬಿಟ್ ಮತ್ತು ಮೂರು ಪೂರ್ತಿ ಹಾಡುಗಳು ಚಿತ್ರದಲ್ಲಿವೆ” ಎಂದರು.
ನಾಳೆ ಸೋಮವಾರದಿಂದ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು ಮತ್ತು ಮಂಗಳೂರನ್ನು ಕೇಂದ್ರೀಕರಿಸಿ ಲೊಕೇಶನ್ ಪ್ಲ್ಯಾನ್ ಹಾಕಲಾಗಿದೆ.