ಬಾದಾಮಿ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅದ್ಭುತ ಶಿಲ್ಪಕಲೆ, ಸುಂದರ ದೇವಾಲಯಗಳು. ವಿಶ್ವಪರಂಪರೆಯ ಪಟ್ಟಿಯಲ್ಲಿರುವ ಬಾದಾಮಿ ಅಂತಾರಾಷ್ಟ್ರೀಯ ಪ್ರವಾಸಿ ತಾಣ. ಆದ್ರೆ ಈ ವಿಶ್ವವಿಖ್ಯಾತ ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಗೆ ಶೌಚಾಲಯಗಳೇ ಇಲ್ಲ. ಇರೋ ಶೌಚಾಲಯಗಳು ಸ್ವಚ್ಫತೆ ಇಲ್ಲದೆ ಗಬ್ಬ ನಾರುತ್ತಿವೆ.
ಮುಖ್ಯವಾಗಿ ಮಹಿಳೆಯರಿಗೆ ಇಲ್ಲಿ ಮೂತ್ರಾಲಯ ಇಲ್ಲದಿರುವುದು ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಪುರಸಭೆ ಕಣ್ಮುಚ್ಚಿ ಕುಳಿತಿದ್ದು ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು ನಗರ ಗಬ್ಬೆದ್ದುಹೋಗುತ್ತಿದೆ. ಇಲ್ಲಿನ ಹಳೆ ತಶೀಲ್ದಾರ್ ಕಚೇರಿ ಎದುರಿಗಿನ ಮುಖ್ಯ ರಸ್ತೆಯಲ್ಲಿ ಕಳೆದ ಮೂರು ಎರಡು ವರ್ಷಗಳಿಂದ ಶೌಚಾಲಯ ನಿರ್ಮಿಸುತ್ತಿದ್ದು ಅದು ಇನ್ನೂ ಪೂರ್ಣಗೊಂಡಿಲ್ಲಾ.ಇದೇನು ಶೌಚಾಲಯ ಕಟ್ಟುತ್ತಿದ್ದಾರೋ ಏನು ವಿಧಾನಸೌಧ ಕಟ್ಟುತ್ತಿದ್ದಾರೋ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವ ಮಟ್ಟಿಗೆ ಕಾಮಗಾರಿ ಮಂದಗಟ್ಟಿಯಲ್ಲಿ ಸಾಗಿದೆ.
ಇಲ್ಲಿನ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಇದರ ಬಗ್ಗೆ ಹೋರಾಟ ನಡೆಸಿದರೂ ಪುರಸಭೆಯವರಾಗಲಿ ಜನಪ್ರತಿನಿಧಿಗಳಾಗಲಿ ಸರಿಯಾಗಿ ಸ್ಪಂದಿಸದೆ ಇರುವುದು ಕಂಡುಬಂದಿದೆ. ಶೀಘ್ರವೇ ಪುರುಷ ಹಾಗೂ ಮಹಿಳಾ ಶೌಚಾಲಯ ನಿರ್ಮಿಸದಿದ್ದರೆ ಉಗ್ರ ಹೋರಾಟ ಮಾಡದೇ ವಿಧಿ ಇಲ್ಲಾ ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಈ ಸಂದರ್ಭದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಿಟಿಜನ್ ಜರ್ನಲಿಸ್ಟ್ ಆಗಿ ರಾಜೇಶ್ ದೇಸಾಯಿ ಅವರು ಈ ಸಮಸ್ಯೆಯ ಕುರಿತ ವಿವರವಾದ ವರದಿ ಕಳುಹಿಸಿದ್ದಾರೆ.