ಚೆನ್ನೈ: ಸ್ವರ ಸಾಮ್ರಾಟ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ (ಎಸ್ಪಿಬಿ) ಇನ್ನು ನೆನಪು ಮಾತ್ರ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಹಿತ ದೇಶದ ಹದಿನಾರು ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿ ಜಗದಗಲದ ಸಂಗೀತ ರಸಿಕರ ಅಭಿಮಾನ ಸಂಪಾದಿಸಿದ್ದ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಗಾನಲೀನರಾದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್ಪಿಬಿ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ವಿಧಿವಿಧಾನಗಳು ಆರಂಭವಾಗಿದೆ.
ಎಸ್ಪಿಬಿ ಪಾರ್ಥಿವ ಶರೀರವನ್ನು ಶುಕ್ರವಾರ ರಾತ್ರಿ ತಿರುವಳ್ಳೂರು ಜಿಲ್ಲೆಯ ತಾಮರೈಪಾಕ್ಕಂನಲ್ಲಿರುವ ಅವರ ತೋಟದ ಮನೆಗೆ ಸ್ಥಳಾಂತರಿಸಲಾಗಿದೆ. ರಾತ್ರಿಯೇ ಅವರ ಮನೆಯ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿ ಅಂತಿಮ ದರ್ಶನವನ್ನು ಪಡೆದರು.
ಎಸ್ಪಿಬಿ ಪುತ್ರ ಶಂಕರ್ ಅವರಿಂದ ವಿಧಿವಿಧಾನಗಳು ನೆರವೇರುತ್ತಿದ್ದು, ತೆಲಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರುತ್ತಿದೆ. ಬೆಳಗ್ಗೆ 11 ಗಂಟೆ ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ. ಈಗಾಗಲೇ ಅನೇಕ ಗಣ್ಯರು ಎಸ್ಪಿಬಿ ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದು, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.