ಬೆಂಗಳೂರು, ನ.13: ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಐದು ವರ್ಷದ ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ. ಆಯೋಗವೂ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕೊರೊನಾ ಕಾರಣದಿಂದ ಮುಂದೂಡಿತ್ತು. ಆದರೆ ಇದೀಗ ಮೂರು ವಾರಗಳಲ್ಲಿ ಗ್ರಾಮ ಪಂಚಾಯ್ತಿಯ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಹೈಕೋರ್ಟ್, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಅವಶ್ಯಕತೆ ಇದ್ದರೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಚಿಸಲಾಗಿದೆ.
ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಕೋರಿ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾ.ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಈ ಮೇಲಿನ ಆದೇಶ ಮಾಡಿದೆ.
ರಾಜ್ಯದ 6025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಗ್ರಾಮ ಪಂಚಾಯಿತಿಗಳ ಅವಧಿ ಇದೇ ಜೂನ್‌ನಿಂದ ಆಗಸ್ಟ್ ಒಳಗೆ ಮುಕ್ತಾಯವಾಗಿದೆ. ಕರೊನಾ ನಿಯಮಾವಳಿ ಜಾರಿಯಲ್ಲಿದ್ದ ಕಾರಣ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ, ಸಾರಿಗೆ ವ್ಯವಸ್ಥೆ ಸಮಸ್ಯೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೊಂದರೆ ಉಂಟಾಗುವ ಸಾಧ್ಯತೆಗಳು ಕಂಡುಬಂದಿದ್ದರಿಂದ ಈ ಹಿಂದೆ ಆಯೋಗ ಚುನಾವಣೆ ಮುಂದೂಡಿತ್ತು.