ಬೆಂಗಳೂರು, ಅ.19: ಉತ್ತರ ಕರ್ನಾಟಕ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ಪರಿಸ್ಥಿತಿ ಶಾಂತವಾಗುತ್ತಿದ್ದಂತೆ ಮತ್ತೊಮ್ಮೆ ವಾಯುಭಾರ ಕುಸಿತ ಸೂಚನೆಯನ್ನು ಹವಮಾನ ಇಲಾಖೆಯು ನೀಡಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದು ಮುಂಜಾನೆಯಿಂದಲೇ ಮಳೆ ಆರಂಭವಾಗಿದೆ.
ರಾಜ್ಯದಲ್ಲಿ ನಾಳೆಯೂ ಜಿಟಿ ಜಿಟಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಹವಾ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಂಭವವಿದೆ. ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುತ್ತಿದ್ದು, ಅದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಹಾಗೂ ಪೂರ್ವ ಭಾಗದ ಜಿಲ್ಲೆಗಳ ಮೇಲೆ ಉಂಟಾಗಿದೆ.
ಇದರಿಂದ ಮೋಡಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುವ ಸಂಭವವಿದೆ. ತತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನಾಳೆಯಿಂದ ಮಳೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳಬೇಕೆಂದು ಸೂಚಿಸಲಾಗಿದೆ. ಇಂದು ಮತ್ತು ನಾಳೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಇದೇ ರೀತಿ ಜಿಟಿ ಜಿಟಿ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಮಳೆ ವಿವರ:
ಬೆಂಗಳೂರು ದಕ್ಷಿಣ (ಗರಿಷ್ಠ) 66, ಬೆಂಗಳೂರು ಉತ್ತರ 64, ಬೆಂಗಳೂರು ಪೂರ್ವ 72, ಆನೇಕಲ್ 68, ಕೊಡಗು 72, ದಕ್ಷಿಣ ಕನ್ನಡ 33, ಚಿಕ್ಕಮಗಳೂರು 66, ಹಾಸನ 96, ಮಂಡ್ಯ 65, ಮೈಸೂರು 80, ಚಾಮರಾಜನಗರ 64, ಯಾದಗಿರಿ 25, ಬೀದರ್ 14, ಕಲಬುರ್ಗಿ 40, ರಾಯಚೂರು 18, ಹಾವೇರಿ 29, ಉತ್ತರ ಕನ್ನಡ 32, ವಿಜಯಪುರ 36, ಬೆಳಗಾವಿ 19, ಚಿತ್ರದುರ್ಗ 21, ತುಮಕೂರು 47, ಬೆಂಗಳೂರು ಗ್ರಾಮಾಂತರ 22 ಮಿಲಿಮೀಟರ್‍ನಷ್ಟು ಮಳೆಯಾದ ವರದಿಯಾಗಿದೆ.
ಕಾಲುವೆ ಸ್ವಚ್ಛಗೊಳಿಸಿದ ಪೋಲೀಸರು:
ಬೆಂಗಳೂರಿನ ಮಲ್ಲತ್ತಹಳ್ಳಿ ಪ್ರದೇಶ ಸಂಪೂರ್ಣ ಕೆರೆಯಂತಾಗಿದ್ದು, ಬಹುತೇಕ ಮನೆಗಳು ಜಲಾವೃತಗೊಂಡಿವೆ. ಮೈಸೂರು ರಸ್ತೆ ಬಳಿಯ ರಾಜಕಾಲುವೆ ನದಿಗಳಂತೆ ತುಂಬಿಹರಿಯುತ್ತಿವೆ. ಮಳೆಯಿಂದಾಗಿ ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಅಡ್ಡಿಯುಂಟಾಗಿದೆ.
ಇನ್ನು ಆರ್.ಆರ್ ನಗರದ ಆರ್ಚ್ ಬಳಿ ಚರಂಡಿ ನೀರು ರಸ್ತೆಗಳಿಗೆ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಪೊಲೀಸರೇ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಚರಂಡಿ ನೀರಿನ ಅವ್ಯವಸ್ಥೆಯಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸಿದೆ.