ಹೊಸದಿಲ್ಲಿ: ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ವರದಿಯ ಪ್ರಕಾರ ಬಾಂಗ್ಲಾದೇಶದ ಜಿಡಿಪಿಯು ಭಾರತದ ಜಿಡಿಪಿಗೆ ಹತ್ತಿರವಾಗುತ್ತಿದೆ ಎಂದು ತಿಳಿದು ಬಂದಿದ್ದು ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿರುವ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯವರು, ಜಿಡಿಪಿ ಕುಸಿತವು ಬಿಜೆಪಿಯ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ ಆರು ವರ್ಷಗಳ ಘನ ಸಾಧನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು ಬಾಂಗ್ಲಾದೇಶದ ಜಿಡಿಪಿ ಭಾರತದ ಜಿಡಿಪಿಗೆ ಹತ್ತಿರವಾಗುತ್ತಿದೆ ಎಂದು ತೋರಿಸುವ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಗ್ರಾಫ್ ಅನ್ನು ಉಲ್ಲೇಖಿಸಿ, ”ಬಿಜೆಪಿಯ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ 6 ವರ್ಷಗಳ ಘನ ಸಾಧನೆ. ಭಾರತವನ್ನು ಹಿಂದಿಕ್ಕಲು ಬಾಂಗ್ಲಾದೇಶ ಸಜ್ಜಾಗಿದೆ” ಎಂದಿದ್ದಾರೆ.
ದೇಶದಲ್ಲಿ ತೀರಾ ಬಿಕ್ಕಟ್ಟಿನ ಅಂಚಿಗೆ ತಲುಪಿದ್ದ ಆರ್ಥಿಕತೆಗೆ ಕೊರೊನಾ ಲಾಕ್‌ಡೌನ್ ಮತ್ತೆ ಕೊಡಲಿ ಏಟು ನೀಡಿದಂತಾಗಿದೆ. ಕೊರೊನಾ ಕಾರಣದಿಂದಾಗಿ ಭಾರತದ ಆರ್ಥಿಕತೆ ಮತ್ತಷ್ಟು ಕುಸಿಯುತ್ತಿದ್ದು ಈ ವರ್ಷ ಆರ್ಥಿಕತೆಯು ಶೇ 10.3ರಷ್ಟು ಕುಸಿತವಾಗಲಿದೆ. ಆದರೆ 2021ರಲ್ಲಿ ಚೇತರಿಕೆ ಕಾಣುತ್ತದೆ. ಶೇ 8.8 ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ.