ದೆಹಲಿ: ಚೀನಾ ಮತ್ತು ಭಾರತ ಸೇನೆಯ ನಡುವೆ ಘರ್ಷಣೆ ಬಳಿಕ ಭದ್ರತಾ ಪರಿಶೀಲನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜುಲೈ 17 ರಂದು ಲಡಾಖ್‌ಗೆ ಭೇಟಿ ನೀಡಲಿದ್ದಾರೆ.
ತದನಂತರ ಜುಲೈ 18 ರಂದು ಜಮ್ಮು ಕಾಶ್ಮೀರ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ರಕ್ಷಣಾ ಸಚಿವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಸಹ ಭಾಗವಹಿಸಲಿದ್ದಾರೆ.
ಈ ಹಿಂದೆಯೇ ರಾಜನಾಥ್ ಸಿಂಗ್ ಲಡಾಖ್ ಗೆ ಭೇಟಿ ನೀಡಬೇಕಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಬಳಿಕ ಜುಲೈ 3ರಂದು ಪ್ರಧಾನಿ ನರೇಂದ್ರ ಮೋದಿ ದಿಢೀರ್ ಅಂತ ಲಡಾಖ್‌ಗೆ ಭೇಟಿ ನೀಡಿ ಸೈನಿಕರ ಯೋಗಕ್ಷೇಮ ವಿಚಾರಿಸಿದ್ದರು. ಈ ನಡುವೆ ಮಂಗಳವಾರ ಚೀನಾ ಮತ್ತು ಭಾರತ ಕಮಾಂಡರ್‌ಗಳ ಮಧ್ಯೆ ನಾಲ್ಕನೇ ಹಂತದ ಮಾತುಕತೆ ನಡೆದಿತ್ತು. ಸುಮಾರು 14 ಗಂಟೆಗಳ ಕಾಲ ಈ ಚರ್ಚೆ ನಡೆದಿತ್ತು. ಜೂನ್ 15 ರಂದು ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ನಡೆದಿದ್ದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರ ಹುತಾತ್ಮಾರಾಗಿದ್ದರು.