ನವದೆಹಲಿ, ಅ.23: ಜಂಟಿ ಪ್ರವೇಶ ಪರೀಕ್ಷೆ(ಜೆಇಇ)ಯ ಬಗ್ಗೆ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜಂಟಿ ಪ್ರವೇಶ ಮಂಡಳಿ(ಜೆಎಬಿ), ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರ ದೃಷ್ಟಿಕೋನದಡಿ ಮುಂದಿನ ವರ್ಷದಿಂದ ಜೆಇಇಯನ್ನು ಹಲವು ಸ್ಥಳೀಯ ಭಾಷೆಗಳಲ್ಲಿ ಆಯೋಜಿಸಲಾಗುವುದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ನೂತನ ಶಿಕ್ಷಣ ನೀತಿ-2020ರಡಿಯಲ್ಲಿ ಜಂಟಿ ಪ್ರವೇಶ ಮಂಡಳಿ(ಜೆಎಬಿ) ಜೆಇಇ ಪರೀಕ್ಷೆಯನ್ನು ಮುಂದಿನ ವರ್ಷದಿಂದ ಹೆಚ್ಚು ಸ್ಥಳೀಯ ಭಾಷೆಗಳಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈಗಾಗಲೇ ದೇಶಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಇಂಗ್ಲಿಷ್, ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ಜೆಇಇ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಜೆಇಇ ಮುಖ್ಯ ಪರೀಕ್ಷೆ ಆಧಾರದ ಮೇಲೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಆಯಾ ರಾಜ್ಯದ ಭಾಷೆಯನ್ನು ಸಹ ಇದರಡಿ ಸೇರಿಸಲಾಗುತ್ತದೆ.
ಕಳೆದ ವರ್ಷ ಗುಜರಾತಿ ಭಾಷೆಯಲ್ಲಿ ಮಾತ್ರ ಸ್ಥಳೀಯ ಭಾಷೆಗೆ ಆದ್ಯತೆ ನೀಡಿರುವುದನ್ನು ಪ್ರಶ್ನಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಳಿದ ಸ್ಥಳೀಯ ಭಾಷೆಗಳಲ್ಲಿ ಕೂಡ ಬರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.