ಈಗಿನ ಒತ್ತಡದ ಜೀವನದ ಜೀವನಶೈಲಿಯಲ್ಲಿ ನಮಗೆ ನಮ್ಮ ಆರೋಗ್ಯದ ಕಡೆ ಗಮನ ಹರಿಸಲು ಸಮಯವೇ ಇರುವುದಿಲ್ಲ. ಹಾಗಾಗಿ ಜನರಲ್ಲಿ ಬಿ ಪಿ, ಶುಗರ್ , ಹಾಗೂ ಮಾನಸಿಕ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆತಂಕಕಾರಿ ವಿಚಾರ ಅಂದ್ರೆ ಯುವಜನತೆಯಲ್ಲೂ ಬಿ ಪಿ , ಶುಗರ್ ಸಾಮಾನ್ಯವಾಗಿ ಕಂಡು ಬರುತ್ತಿದೆ.
ಇವೆಲ್ಲಾ ಮಾನಸಿಕ ಒತ್ತಡದಿಂದಲೇ ಬರುವುದೆಂದೂ ಅಧ್ಯಯನದಿಂದ ತಿಳಿದುಬಂದಿದೆ. ನಮ್ಮ ಮನಸ್ಸನ್ನು ಶಾಂತಿ ಸಮಾಧಾನದಲ್ಲಿ ಇಟ್ಟುಕೊಂಡು ಶಾಂತತೆಯನ್ನು ಕಾಪಾಡಿಕೊಂಡಲ್ಲಿ ಇಂಥಾ ಗಂಭೀರ ಸಮಸ್ಯೆಗಳಿಂದ ಸ್ವಲ್ಪವಾದರೂ ದೂರವಿರಬಹುದು. ಟೆನ್ಶನ್ ನಿಂದಾಗಿಯೇ ಈಗಿನ ಜನರ ಕೂದಲು ಕೂಡಾ ಬಹು ಬೇಗನೇ ಬಿಳಿಯಾಗುತ್ತಿದೆ, ಬೊಕ್ಕ ತಲೆ ಹೆಚ್ಚುತ್ತಿದೆ.
ಈ ಮಾನಸಿಕ ಒತ್ತಡದಿಂದ ಹೇಗೆ ಹೊರಗೆ ಬರಬಹುದು ಎಂಬುದು ಕೆಲವರಿಗೆ ಗೊತ್ತಾಗುವುದಿಲ್ಲ. ಮಾನಸಿಕ ಒತ್ತಡ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ಮುಕ್ತವಾಗಲು ಕೆಲವು ಟಿಪ್ಸ್ ಇಲ್ಲಿವೆ.
ಮೊದಲನೆಯದಾಗಿ ಯೋಚನೆಯ ಮೇಲೆ ಕಂಟ್ರೋಲ್ ಮಾಡಿಕೊಳ್ಳಬೇಕು. ಜಗತ್ತಲ್ಲಿ ಅತ್ಯಂತ ವೇಗವಾಗಿ ಕೆಲಸ ಮಾಡುವ ಅಂಗ ಅಂದ್ರೆ ಮೆದುಳು. ಮನಸ್ಸನ್ನು ನಿರಾಳವಾಗಿಟ್ಟಾಗ ಮೆದುಳು ಹಗುರವಾಗಿರುತ್ತೆ. ಎರಡನೆಯ ಟಿಪ್ ಅಂದ್ರೆ ಚಿಂತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಚಿಂತೆ ಚಿತೆಗೇರಿಸುತ್ತೆ ಅನ್ನೋ ಮಾತನ್ನ ಸದಾ ನೆನಪಿನಲ್ಲಿಟ್ಟುಕೊಂಡು, ಕೆಲ ನಿಮಿಷಗಳನ್ನು ಧ್ಯಾನಕ್ಕೆ ಮೀಸಲಿಡಿ. ಆಗ ಮೆದುಳು ರಿಲಾಕ್ಸ್ ಆಗುತ್ತೆ.
ಮೂರನೆಯ ಸೂತ್ರ ದಿನದ ಅರ್ದಗಂಟೆ ಕಾಲ ವ್ಯಾಯಾಮ ಮಾಡಿ. ಜೊತೆಗೆ ಧ್ಯಾನ ಮಾಡಿಕೊಳ್ಳಿ. ಕೊನೆಯ ಟಿಪ್ಸ್ ನಮಗೆ ಗೊತ್ತಾದ ರೀತಿಯಲ್ಲಿ ಡಾನ್ಸ್ ಮಾಡುವುದು ಅಥವಾ ಸಂಗೀತ ಹಾಡುವುದು. ಇದರಿಂದಲೂ ಮನಸನ್ನು ಖುಷಿಯಲ್ಲಿಟ್ಟುಕೊಳ್ಳಬಹುದು.
ಮೆದುಳು ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಆದ್ದರಿಂದ ಆದಷ್ಟು ಖುಷಿ ಖುಷಿಯಾಗಿರಿ. ಸಣ್ಣ ಸಣ್ಣ ವಿಷಯಕ್ಕೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅತೀ ಹೆಚ್ಚಾದ ಗೊಂದಲಗಳಿಂದಲೂ ಮನಸಿಗೆ ಒತ್ತಡ ಬೀಳುತ್ತದೆ.
ನಮ್ಮನ್ನು ನಾವು ಗಟ್ಟಿಯಾಗಿಟ್ಟುಕೊಳ್ಳಬೇಕು. ಇದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೆಚ್ಚಾಗಿ ಚಿಂತೆ ನಮ್ಮನು ಕಾಡಿದಾಗ ಇನ್ನೊಬ್ಬರಲ್ಲಿ ಮಾತನಾಡುವುದರಿಂದಲೂ ಚಿಂತೆ ಮರೆಯಬಹುದು. ನಮ್ಮ ಸುತ್ತ ಮುತ್ತಲಿರುವ ಮರ ಗಿಡಗಳನ್ನು ಆರೈಕೆ ಮಾಡುವುದರಿಂದಲೂ ನಾವು ಪ್ರಶಾಂತತೆಯನ್ನು ಮನಸಲ್ಲಿ ಕಾಪಾಡಿಕೊಳ್ಳಬಹುದು.