ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಕುತೂಹಲ ಘಟ್ಟ ತಲುಪಿದ್ದು, ಪಂದ್ಯ ಗೆಲ್ಲಲು ಪ್ರವಾಸಿ ವೆಸ್ಟ್ ಇಂಡೀಸ್‍ಗೆ 312 ರನ್‍ಗಳ ಗುರಿ ಎದುರಾಗಿದೆ.
ಮ್ಯಾಂಚೆಸ್ಟರ್‍ನ ಓಲ್ಡ್‍ಟ್ರಾಫರ್ಡ್‍ನಲ್ಲಿ ನಡೆಯುತ್ತಿರುವ ಪಂದ್ಯದ ಕೊನೆಯ ದಿನವಾದ ಸೋಮವಾರ ಆಟ ಮುಂದುವರಿಸಿದ ಇಂಗ್ಲೆಂಡ್, ದ್ವಿತೀಯ ಇನ್ನಿಂಗ್ಸ್‍ನಲ್ಲಿ ಬೆನ್ ಸ್ಟೋಕ್ಸ್ ಗಳಿಸಿದ ಅಜೇಯ 78 ರನ್‍ಗಳ ನೆರವಿನೊಂದಿಗೆ 3 ವಿಕೆಟ್ ನಷ್ಟಕ್ಕೆ 129 ರನ್‍ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಮೊದಲ ಇನ್ನಿಂಗ್ಸ್ ಮೊತ್ತ 182 ರನ್‍ಗಳೊಂದಿಗೆ ಪ್ರವಾಸಿ ತಂಡಕ್ಕೆ 312 ರನ್‍ಗಳ ಗುರಿ ನೀಡಿದೆ. ಇಂಗ್ಲೆಂಡ್ ನೀಡಿರುವ ಸವಾಲಿನ ಗುರಿ ಬೆನ್ನತ್ತಿರುವ ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್‍ನ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಕ್ರೇಗ್ ಬ್ರಾಥ್ವೈಟ್(12) ಹಾಗೂ ಜಾನ್ ಕ್ಯಾಂಪ್‍ಬೆಲ್(4) ಹಾಗೂ ಶಾಯ್ ಹೋಪ್(7) ರನ್‍ಗಳಿಸಿ ಪೆವಿಲಿಯನ್ ಸೇರಿದ್ದಾರೆ. ಸದ್ಯ 3 ವಿಕೆಟ್ ನಷ್ಟಕ್ಕೆ 23 ರನ್‍ಗಳಿಸಿ ಸಂಕಷ್ಟಕ್ಕೆ ಸಿಲುಕಿರುವ ವೆಸ್ಟ್ ಇಂಡೀಸ್ ಹೋರಾಟ ಮುಂದುವರಿಸಿದೆ.