ರಾಮನಗರ,ಸೆ.06: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಮಾಜಿ ಸಚಿವ ಡಿಕೆಶಿ ನಿವಾಸಕ್ಕೆ ತೆರಳಿದ್ದರು. ರಾಮನಗರದ ಜಿಲ್ಲೆ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿರುವ ಡಿಕೆಶಿ ನಿವಾಸಕ್ಕೆ ಭೇಟಿ ಕೊಟ್ಟ ಕುಮಾರಸ್ವಾಮಿಯವರು, ಶಿವಕುಮಾರ್‍ರ ತಾಯಿ ಗೌರಮ್ಮನವರಿಗೆ ಧೈರ್ಯ ತುಂಬಿದರು.
ಈ ವೇಳೆ ಗೌರಮ್ಮ ತಮ್ಮ ಮಗನ ಪರಿಸ್ಥಿತಿಯ ಬಗ್ಗೆ ಕಣ್ಣೀರಿಟ್ಟಿದ್ದು, ಹೆಚ್ಡಿಕೆ ಭಾವುಕರಾದರು. ಡಿಕೆಶಿಯವರ ತಾಯಿಯ ಕಾಲಿಗೆ ನಮಸ್ಕರಿಸಿದ ಮಾಜಿ ಸಿಎಂ, ನಿಮ್ಮ ಕಷ್ಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. ಕಣ್ಣೀರು ಹಾಕಬೇಡಿ, ಧೈರ್ಯ ತಂದುಕೊಳ್ಳಿ ಎಂದು ಸ್ಥೈರ್ಯ ತುಂಬಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇಡಿ,ಐಟಿ ಅಧಿಕಾರಿಗಳನ್ನ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಗುಜರಾತ್ ಶಾಸಕರನ್ನ ರಕ್ಷಣೆ ಕೊಟ್ಟಾಗಿನಿಂದ ನಿರಂತರವಾಗಿ ನಡೆಯುತ್ತಿದೆ. ಅವರೇನು ಸಾಕ್ಷ್ಯ ನಾಶ ಮಾಡಿಲ್ಲ. ನಮ್ಮ ಸಮುದಾಯದಲ್ಲಿ ವಿಜಯದಶಮಿ ಸಮಯದಲ್ಲಿ ಪಿತೃಪಕ್ಷ ಪೂಜೆ ಮಾಡುತ್ತೇವೆ. ನಮ್ಮ ಶಾಸಕನ್ನ ಹೈಜಾಕ್ ಮಾಡಲು 30ಕೋಟಿ ಹಣ ಕೊಟ್ಟಿದ್ದಾರೆ. ಅವರ ಮೇಲೆ ಯಾವ ದಾಳಿಯೂ ಆಗಿಲ್ಲ ಎಂದು ಹರಿಹಾಯ್ದರು.
ಡಿ.ಕೆ ಶಿವಕುಮಾರ್ ಅವರನ್ನ ಕಸ್ಟಡಿಗೆ ತಗೆದುಕೊಂಡು ತನಿಖೆ ಮಾಡುವ ಅವಶ್ಯಕತೆ ಇರಲಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಅಂತಾರೆ . ಅವರು ಮಾಡುತ್ತಿರೋದು ದ್ವೇಷದ ರಾಜಕಾರಣ. ಪ್ರವಾಹ ಬಂದಿದೆ ಅದರ ಬಗ್ಗೆ ಅವರಿಗೆ ಚಿಂತೆ ಇಲ್ಲ. ಜನಪರ ಕೆಲಸ ಮಾಡಲು ಮರೆತಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.