ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಸಂಪರ್ಕವಿದೆ. ನಟಿ ಸಂಜನಾ ಗಂಡ ಅಜೀದ್ ಕೂಡ ಡ್ರಗ್ ದಂಧೆಯಲ್ಲಿ ಇದ್ದಾನೆ. ಈ ದಂಧೆಗೆ ದಾವೂದ್ ಇಬ್ರಾಹಿಂ ಮೂಲ ಪುರುಷನಾಗಿದ್ದು, ಆಜೀಮ್ ಅಸ್ತಾನ ಎಂಬ ದೇಶ ದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರ ರಂಗವನ್ನು ಆವಾರಿಸಿದ್ದಾರೆ ಎಂದು ಕಿಡಿಕಾರಿದರು.
ಡ್ರಗ್ ಮಾಫಿಯಾದಲ್ಲಿ ರಾಜಕೀಯ ಮುಖಂಡರಿದ್ದು, ಜಮೀರ್ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರ ನಟರನ್ನು ಕರೆಸುತ್ತಾರೆ. ಹೀಗಾಗಿ ವ್ಯವಸ್ಥಿತ ಜಾಲದಲ್ಲಿ ಜಮೀರ್ ಇರುವುದು ನಿಶ್ಚಿತವಾಗಿದೆ. ಅಲ್ಲದೇ ಪಾದರಾಯನಪುರ, ಡಿಜೆ ಹಳ್ಳಿ ಗಲಾಟೆಯಲ್ಲಿ ಡ್ರಗ್ಸ್ ಕಾರಣ ಎಂದು ಆರೋಪಿಸಿದ ಅವರು, ಈ ವಿಷಯದಲ್ಲಿ ಬಿಜೆಪಿ ಅವರು ಧಮ್ ತೋರಿಸುವ ಮೂಲಕ ಡ್ರಗ್ ಮಾಫಿಯಾದಲ್ಲಿರುವವರನ್ನು ಒದ್ದು ಒಳಗೆ ಹಾಕಬೇಕು ಎಂದರು.
ಸಿಸಿಬಿ ತನಿಖೆ ಬಗ್ಗೆ ನನಗೆ ವಿಶ್ವಾಸ ಇಲ್ಲ, ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುತ್ತದೆ. ಇಡೀ ರಾಜ್ಯದಲ್ಲಿ ಎಲ್ಲಾ ಕಡೆ ಡ್ರಗ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆಗೆ ಈ ಬಗ್ಗೆ ಹೆಜ್ಜೆ ಹೆಜ್ಜೆಗೂ ಗೊತ್ತು. ಕೇಂದ್ರದಿಂದ ಬಂದು ರೈಡ್ ಮಾಡುತ್ತಾರೆ, ಕರ್ನಾಟಕ ಗುಪ್ತ ಇಲಾಖೆ ಕತ್ತೆ ಕಾಯುತ್ತಾ ಇದ್ದಾರಾ?, ರಾಜಕಾರಣಿಗಳು ಪೊಲೀಸರ ಕೈ ಕಟ್ಟಿ ಹಾಕಿದ್ದಾರೆ. ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್ ಗಳಿದ್ದು, ಸಾವಿರಾರು ಕೋಟಿ ವ್ಯಾಪಾರ ಆಗುತ್ತಿರುವುದು ಡ್ರಗ್ಸ್‌ನಿಂದಲೇ. ವೈನ್ ಲಾಬಿ ಡ್ರಗ್ ಲಾಬಿ ರಾಜಕೀಯವನ್ನು ಕೈಯಲ್ಲಿ ಹಿಡಿದುಕೊಂಡಿದೆ ಎಂದು ಕಿಡಿಕಾರಿದರು.
32 ಮಂದಿ ರಾಜಕಾರಣಿಗಳು ಡ್ರಗ್ ಮಾಫಿಯಾದಲ್ಲಿದ್ದು, ಈ ಬಗ್ಗೆ ಲಿಸ್ಟ್ ಮಾಡಿ ಹೋಂ ಮಿನಿಸ್ಟರ್‌ಗೆ ಕೊಡುತ್ತೇನೆ. ಆಧಾರ ಸಹಿತವಾಗಿ ಲಿಸ್ಟ್ ನಾನು ಕೊಡುತ್ತೇನೆ. ಡ್ರಗ್ಸ್ ಮಾಫಿಯಾದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲರೂ ಇದ್ದಾರೆ. 8 ಹಾಗೂ 9ನೇ ತರಗತಿ ಮಕ್ಕಳವರೆಗೆ ಡ್ರಗ್ಸ್ ಪ್ರವೇಶ ಮಾಡಿದೆ ಎಂದು ಮತ್ತೊಮ್ಮೆ ಆರೋಪಿಸಿದರು.