ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
ಡ್ರಗ್ಸ್ ದಂಧೆಯೊಂದಿಗೆ ಸಂಬಂಧ ಹೊಂದಿರುವ ನಟಿಯರು ಬಿಜೆಪಿ ಸಹವಾಸದಲ್ಲಿರುವವರು ಎಂದು ಕಾಂಗ್ರೆಸ್ ಆರೋಪ ಮಾಡಿದ್ದರೆ. ಇದರ ಬೆನ್ನಲ್ಲೇ ಡ್ರಗ್ ಮಾಫಿಯಾದ ನಂಟು ಆರೋಪಿತ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ, ಕಾಂಗ್ರೆಸ್ ನಾಯಕರೊಂದಿಗಿರುವ ಫೋಟೋಗಳನ್ನು ಬಿಜೆಪಿ ಸಹ ಬಿಡುಗಡೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿಯು, “ಮಾದಕ ವಸ್ತು ದಂಧೆ ಪ್ರಕರಣ ತನಿಖೆಯ ಹಂತದಲ್ಲಿದ್ದು ಬಿಜೆಪಿ ಸರ್ಕಾರ ಕಠಿಣ ನಿಲುವು ತಾಳಿದೆ, ಕಾಂಗ್ರೆಸ್ ವೃಥಾ ಆರೋಪ ಮಾಡಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ. ನಟನಟಿಯರು ಎಲ್ಲಾ ಪಕ್ಷದವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಪಕ್ಷದ ಜೊತೆಗಿನ ಸಂಬಂಧ ಎಂದು ಬಿಂಬಿಸಿ ಆರೋಪಿಸುವುದು ಹಾಸ್ಯಾಸ್ಪದ. ಈ ನಂಟಿನ ಬಗ್ಗೆ ಏನು ಹೇಳುತ್ತೀರಿ?” ಎಂದು ಪ್ರಶ್ನಿಸಿದೆ.
‘ಮಾದಕವಸ್ತು ಮಾರಾಟ ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಂಧಿತರಲ್ಲಿ ಕೆಲವರಿಗೆ ಬಿಜೆಪಿಯ ನಂಟಿದೆ, ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಯಬೇಕು’ ಎಂದು ಆರೋಪಿಸಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಡ್ರಗ್ ಮಾಫಿಯಾದ ನಂಟು ಹೊಂದಿರುವ ಆರೋಪಿ ನಟಿಯರಾದ ರಾಗಿಣಿ ಹಾಗೂ ಸಂಜನಾರ ಫೋಟೋಗಳನ್ನು ಪೋಸ್ಟ್ ಮಾಡಿದೆ. ಹಾಗೆಯೇ ಇದರೊಂದಿಗೆ ಕಾಂಗ್ರೆಸ್‌ನ ಟ್ವೀಟ್‌ನ್ನು ಕೂಡಾ ಉಲ್ಲೇಖಿಸಿದೆ.