ಮೈಸೂರು, ನ. 13: ತಂಗಿಯ ಮಾಂಗಲ್ಯದ ಸರ ಕಳವು ಮಾಡಿದ್ದ ಚಾಲಾಕಿ ಅಣ್ಣನನ್ನು ಬಂಧಿಸಿರುವ ನಜ಼ರಬಾದ್ ಪೊಲೀಸರು, ಬಂಧಿತನಿಂದ 3.5 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಹೂಟಗಳ್ಳಿ ಕೆಎಚ್‍ಬಿ ಕಾಲೋನಿ ನಿವಾಸಿ ಸಂತೋಷ್ ಕುಮಾರ್(33) ಬಂಧಿತ ಆರೋಪಿ. ತನ್ನ ತಂಗಿಯೊಂದಿಗೆ ನಗರದ ಮೃಗಾಲಯದ ಮುಂಭಾಗದ ಬಟ್ಟೆ ಅಂಗಡಿಗೆ ತೆರಳಿದ್ದ ಸಂತೋಷ್, ಆಕೆಯ ವ್ಯಾನಿಟಿ ಬ್ಯಾಗ್‍ನಲ್ಲಿ ಇಡಲಾಗಿದ್ದ ಚಿನ್ನದ ಮಾಂಗಲ್ಯದ ಸರ ಕದ್ದು ಪರಾರಿಯಾಗಿದ್ದ. ಈ ಸಂಬಂಧ ನಜ಼ರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ನ.12ರಂದು ಹಿನಕಲ್ ಸಿಗ್ನಲ್ ಬಳಿ ಆರೋಪಿ ಸಂತೋಷ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಬಟ್ಟೆ ಅಂಗಡಿಯಲ್ಲಿ ತನ್ನ ತಂಗಿ ನೀಡಿದ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಸರವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.