ಚಾಮರಾಜನಗರ, ನ. 18: ಪ್ರತಿವರ್ಷ ಬಲಿಪಾಡ್ಯಮಿಯ ಮಾರನೇ ದಿನ ಜರುಗುವ ಗೊರೆ ಹಬ್ಬವನ್ನು ನೆರೆಯ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಗುಮಟಾಪುರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಗ್ರಾಮದ ಬೀರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ರಾಶಿಗಟ್ಟಲೆ ಸಗಣಿಯನ್ನು ಸಂಗ್ರಹಿಸಲಾಗಿತ್ತು. ಸಗಣಿಯನ್ನು ದೊಡ್ಡ ಉಂಡೆಗಳನ್ನಾಗಿ ಮಾಡಿಕೊಂಡು ಮಕ್ಕಳು, ಯುವಕರು–ಹಿರಿಯರು ಎಂಬ ಬೇಧಭಾವವಿಲ್ಲದೇ ಪರಸ್ಪರ ಹೊಡೆದಾಡಿಕೊಂಡು ಎಲ್ಲರೂ ಸಗಣಿಯಲ್ಲೇ ಮಿಂದೆದ್ದರು.
ಜಿಲ್ಲಾ ಕೇಂದ್ರದಿಂದ 23 ಕಿ.ಮೀ ದೂರದಲ್ಲಿರುವ ಗುಮಟಾಪುರದಲ್ಲಿ ನಡೆದ ಸಾಮರಸ್ಯದಿಂದ ಕೂಡಿದ ಗೊರೆ ಹಬ್ಬದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರೇ ಇದ್ದರು.
ಚಾಡಿಕೋರನ ಮೆರವಣಿಗೆ:
ಗ್ರಾಮದ ವ್ಯಕ್ತಿಯೊಬ್ಬನಿಗೆ ಹುಲ್ಲಿನ ಮೀಸೆ, ದಾಡಿ, ಹಂಬುಸೊಪ್ಪಿನ ದಾರ ಕಟ್ಟಿ ಆತನಿಗೆ ಚಾಡಿಕೋರ ಎಂದು ಹೆಸರಿಟ್ಟು ಕತ್ತೆಯ ಮೇಲೆ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಾಗವಹಿಸಿದ್ದ ಜನರೆಲ್ಲ ಮೆರವಣಿಗೆಯುದ್ದಕ್ಕೂ ಚಾಡಿಕೋರನಿಗೆ ಕೆಟ್ಟಪದಗಳಿಂದ ಬಯ್ಯುತ್ತಾ ಸಾಗಿದರು. ಮೆರವಣಿಗೆ ನಂತರ ಚಾಡಿಕೋರನನ್ನು ಬೀರೇಶ್ವರ ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸಿ ಮೆರವಣಿಗೆ ಮುಕ್ತಾಯಗೊಳಿಸಲಾಯಿತು.ಈ ಬಾರಿ ಕೋವಿಡ್ ಕಾರಣದಿಂದ ಕಡಿಮೆ ಸಂಖ್ಯೆಯ ಜನರು ಭಾಗವಹಿಸಿ ಸಗಣಿಯಲ್ಲಿ ಹೊಡೆದಾಡಿಕೊಂಡರು.