ಚೆನ್ನೈ, ಅಕ್ಟೋಬರ್ 14 : ತಮಿಳುನಾಡು ಸರ್ಕಾರವು ಕೋವಿಡ್ ಭೀತಿ ಹಿನ್ನಲೆಯಲ್ಲಿ ಬೇರೆ ರಾಜ್ಯಗಳಿಂದ ತಮಿಳುನಾಡಿಗೆ ಆಗಮಿಸುವ ಜನರಿಗೆ ಇ-ಪಾಸ್ ಕಡ್ಡಾಯಗೊಳಿಸಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ರಾಜ್ಯದಲ್ಲಿ ಒಟ್ಟು 6,65,930 ಕೋವಿಡ್ ಸೋಂಕಿತರಿದ್ದಾರೆ. ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠಕ್ಕೆ ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್ ಮಾಹಿತಿಯನ್ನು ನೀಡಿದ್ದಾರೆ.
ತಮಿಳುನಾಡು ಸರ್ಕಾರವು ನೂತನ ನಿಯಮಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಆ ನಿಯಮಗಳ ಪ್ರಕಾರ ರಾಜ್ಯಕ್ಕೆ ಆಗಮಿಸುವ ಜನರು ಇ-ಪಾಸ್ ಪಡೆಯಲು ಮೂಲ ಮಾಹಿತಿಗಳನ್ನು ಭರ್ತಿ ಮಾಡಬೇಕು. ಕೋವಿಡ್ ಸೋಂಕಿತರ ಜೊತೆ ಸಂಪರ್ಕ ಹೊಂದಿವರನ್ನು ಪತ್ತೆ ಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ರಾಜ್ಯದ ಘಟ್ಟ ಪ್ರದೇಶಗಳಿಗೆ ಪ್ರಯಾಣ ಮಾಡುವಾಗ ಇ-ಪಾಸ್ ಹಾಜರುಪಡಿಸುವುದು ಕಡ್ಡಾಯವಾಗಿದೆ. ಘಟ್ಟ ಪ್ರದೇಶಗಳಲ್ಲಿ ಖಾಯಂ ನಿವಾಸ ಹೊಂದಿರುವವರಿಗೆ ಮಾತ್ರ ಇ-ಪಾಸ್ ನೀಡಲಾಗುತ್ತದೆ. ಪ್ರವಾಸಿಗರಿಗೆ ಅನುಮತಿ ಇಲ್ಲಎಂದು ಸರ್ಕಾರ ಹೇಳಿದೆ.
ಘಟ್ಟ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಕಡಿಮೆ ಇರುವ ಕಾರಣ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಕೇಂದ್ರ ಗೃಹ ಇಲಾಖೆ ಅನ್ ಲಾಕ್ 3.0 ಮಾರ್ಗಸೂಚಿ ಪ್ರಕಟಿಸುವಾಗ ರಾಜ್ಯಗಳ ನಡುವೆ ಸಂಚಾರ ನಡೆಸಲು ಯಾವುದೇ ಪಾಸು ಕಡ್ಡಾಯಗೊಳಿಸಬಾರದು ಎಂದು ಹೇಳಿತ್ತು. ಆದ್ದರಿಂದ, ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಮಾಹಿತಿ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಸೂಚನೆ ನೀಡಿದರು.